ದೊಡ್ಡಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಚುನಾವಣಾ ನಾಮಪತ್ರ ಸಲ್ಲಿಸಿದರು.ಇದಕ್ಕೆ ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಸಾಥ್ ನೀಡಿದರು.
ನಗರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಿ, ಅಲ್ಲಿಂದ ಬಸ್ ನಿಲ್ದಾಣ, ವಿವೇಕಾನಂದ ರಸ್ತೆ, ರುಮಾಲೆ ಚೌಕದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರೆದ ವಾಹನದಲ್ಲಿ ಆಗಮಿಸಿದರು.
ತಾಲೂಕು ಕಚೇರಿ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ದೊಡ್ಡಬಳ್ಳಾಪುರದ ಅಭಿವೃದ್ಧಿಗಾಗಿ ಯುವ ನಾಯಕ ಧೀರಜ್ ಮುನಿರಾಜು ಅವರಿಗೆ ಜನ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರದಂತೆ ರಾಜ್ಯದಲ್ಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಧೀರಜ್ ಶಾಸಕರಾದರೆ ರೈತರು, ಕಾರ್ಮಿಕರು, ದೀನ ದಲಿತರು ಹಾಗೂ ನೇಕಾರರ ಪರ ವಿಧಾನಸಭೆಯಲ್ಲಿ ದನಿ ಎತ್ತಲಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರು ಇದೇ ಉತ್ಸಾಹದಿಂದ ಬೂತ್ ಮಟ್ಟದಲ್ಲಿ ಶಕ್ತಿ ಪ್ರದರ್ಶಿಸಬೇಕು. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಅತ್ಯಧಿಕ ಮತಗಳಿಂದ ಧೀರಜ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಪ್ರತಿ ಗ್ರಾಮದ ಅಂಗಡಿಗೆ ಮದ್ಯ ಹಂಚಿ ಮನೆಗಳನ್ನು ಹಾಳು ಮಾಡಿ ಎಷ್ಟೋ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗುಡುಗಿದರು.
ಇದೆ ವೇಳೆ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಮಾತನಾಡಿ, ನನಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲ. ವಿದ್ಯಾವಂತ ಯುವಕನಿಗೆ ಪಕ್ಷ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸಿದೆ. ಪಕ್ಷದ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಿ ಮೋದಿ ಅವರಂತೆ ನಾನೂ ಕೂಡ ದೊಡ್ಡಬಳ್ಳಾಪುರದ ಜನಸೇವಕನಾಗಿ ಪ್ರತಿ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಅಭಿವೃದ್ದಿಗೆ ನನ್ನ ಜೀವನ ಮುಡುಪಾಗಿಡುತ್ತೇನೆ. ಮೇ 10 ರಂದು ನಡೆಯುವ ಮತದಾನ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಬೂತ್ಮಟ್ಟದಲ್ಲಿ ಕೆಲಸ ಮಾಡಬೇಕು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇನೆ. ದೇಶದಲ್ಲಿ ಯಾವುದಾದರೂ ಒಂದು ಪಕ್ಷದಿಂದ ಅಭಿವೃದ್ಧಿ ಸಾಧ್ಯ ಎನ್ನುವುದಾದರೆ ಅದು ಬಿಜೆಪಿ ಎಂದು ಹೇಳಿದರು.
ತಾಲೂಕಿನಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್, ನರ್ಸಿಂಗ್ ಹಾಗೂ ಡಿಪ್ಲೋಮಾ ಕಾಲೇಜು ಸ್ಥಾಪಿಸಲು ಶ್ರಮಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.
ದೊಡ್ಡಬಳ್ಳಾಪುರಕ್ಕೆ ನರೇಂದ್ರ ಮೋದಿ ಆಗಮನ..?
ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ಇವರ ಜೊತೆ ಜೆ.ಪಿ ನಡ್ಡಾ,ಯೋಗಿ ಆಧಿತ್ಯನಾಥ್, ಅಮಿತ್ ಶಾ ಬರಲಿದ್ದಾರೆ..ಇದೆ ವೇಳೆ ದೊಡ್ಡಬಳ್ಳಾಪುರಕ್ಕೆ ನರೇಂದ್ರ ಮೋದಿ ಆಗಮಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅಭಿಪ್ರಾಯ ಪಟ್ಟರು..
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಹೆಚ್ ಹನುಮಂತರಾಯಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ್, ಬಮೂಲ್ ಹಾಗೂ ಕೆಎಂಎಫ್ ನಿರ್ದೇಶಕ ಆನಂದ್, ತಿ.ರಂಗರಾಜ್ ಎಂ.ಜಿ ಶ್ರೀನಿವಾಸ್, ಅಶ್ವತ್ಥ ನಾರಾಯಣ ಕುಮಾರ್, ಮುನಿರಾಜ್, ನಾಗೇಶ್ ಇತರರು ಇದ್ದರು.