ಸಾಮಾನ್ಯವಾಗಿ ಭಾರತೀಯರು ಬಳಸುವ ಅಡುಗೆ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ನಾವು ಬಳಸುವ ಬಹಳಷ್ಟು ಮಸಾಲೆಗಳು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತವೆ. ನಮಗೆಲ್ಲಾ ತಿಳಿದ ಮಟ್ಟಿಗೆ ನಮ್ಮೆಲ್ಲರ ನೆಚ್ಚಿನ ಮಸಾಲೆ ಪದಾರ್ಥ ಏಲಕ್ಕಿ ಅಥವಾ ಎಲೈಚಿ ಸುವಾಸನಾಭರಿತ ಗಿಡಮೂಲಿಕೆಗಳಲ್ಲಿ ಒಂದಾಗಿದೆ.
ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು ಊಟದ ರುಚಿ ಹೆಚ್ಚಿಸಲು, ಅಡುಗೆ ಘಮ ಬರಲು ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರುವವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಆದರೆ ಏಲಕ್ಕಿ ಬಗ್ಗೆ ಅನೇಕರಿಗೆ ಗೊತ್ತಿರದ ವಿಚಾರವೊಂದಿದೆ. ಅದೇನೆಂದರೆ ಏಲಕ್ಕಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಅಥವಾ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಹೌದು, ನಿಮಗೆ ಮಧುಮೇಹ ಇದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಮಧುಮೇಹದಿಂದ ಬಳಲುತ್ತಿದ್ದರೆ ನೀವು ಅವರಿಗೆ ಏಲಕ್ಕಿ ಚಹಾವನ್ನು ಕೊಡಿ. ಈ ಲೇಖನದಲ್ಲಿ ಏಲಕ್ಕಿ ಚಹಾದ ವಿಧಗಳನ್ನು ಪ್ರಯೋಜನಗಳ ಸಮೇತ ನೀಡಲಾಗಿದೆ ನೋಡಿ…
ಏಲಕ್ಕಿಯಲ್ಲಿ ಎರಡು ವಿಧ
ಏಲಕ್ಕಿಯಲ್ಲಿ ಕಪ್ಪು ಏಲಕ್ಕಿ ಮತ್ತು ಹಸಿರು ಏಲಕ್ಕಿ ಎಂದು ಎರಡು ವಿಧಗಳಿವೆ. ಕಪ್ಪು ಏಲಕ್ಕಿಗೆ ಹೋಲಿಸಿದರೆ ಹಸಿರು ಏಲಕ್ಕಿಯನ್ನು ಹೆಚ್ಚು ಬಳಸಲಾಗುತ್ತದೆ. ಆದರೆ ಆರೋಗ್ಯ ಸಮಸ್ಯೆಯನ್ನು ಗುಣಪಡಿಸುವಲ್ಲಿ ಎರಡೂ ಒಂದೇ ಸಾಮರ್ಥ್ಯವನ್ನು ಹೊಂದಿವೆ. ನಿಮ್ಮ ಮಧುಮೇಹ ನಿರ್ವಹಣೆಗೆ ನೀವು ಇವುಗಳಲ್ಲಿ ಯಾವ ಏಲಕ್ಕಿಯನ್ನಾದರೂ ಸೇವಿಸಬಹುದು. ಅಂದಹಾಗೆ ಮಧುಮೇಹ ನಿರ್ವಹಣೆಗೆ ಏಲಕ್ಕಿ ಸೇವನೆ ಹೇಗೆ ಸಹಾಯ ಮಾಡುತ್ತದೆ ಎಂದು ನಾವು ನೋಡೋಣ ಬನ್ನಿ.
ಅಧಿಕ ಪ್ರಮಾಣದ ಸಕ್ಕರೆ ನಿಯಂತ್ರಣ
ಏಲಕ್ಕಿ ಉತ್ಕರ್ಷಣ ನಿರೋಧಕ ( ಆ್ಯಂಟಿ ಆಕ್ಸಿಡೆಂಟ್ ) ಮತ್ತು ಪ್ರತಿಜೀವಕ (ಆಂಟಿಬಯಾಟಿಕ್) ಗುಣಗಳಿಂದ ಕೂಡಿದ್ದು, ತೂಕವನ್ನು ಕಡಿಮೆ ಮಾಡಲು, ರಕ್ತದೊತ್ತಡ ನಿಯಂತ್ರಣವನ್ನು ಸುಧಾರಿಸಲು ಮತ್ತು ಖಿನ್ನತೆಯನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ. ಏಲಕ್ಕಿಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಉರಿಯೂತ ಮತ್ತು ಹೈಪೋಲಿಪಿಡೆಮಿಕ್ ಗುಣಗಳಿವೆ ಎಂದು ಹಲವಾರು ವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ. ಇದು ರಕ್ತದಲ್ಲಿರುವ ಅಧಿಕ ಪ್ರಮಾಣದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಒಂದು ಟೀ ಸ್ಪೂನ್ ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳುವುದರಿಂದ ಪ್ರಿಡಯಾಬಿಟಿಸ್ ಪರಿಣಾಮಗಳನ್ನು ಸಹ ಎದುರಿಸಬಹುದು.
ಸಕ್ಕರೆ ಇಲ್ಲದ ಏಲಕ್ಕಿ ಚಹಾಗಳು
ನೀವು ಮಧುಮೇಹ ರೋಗಿಯಾಗಿದ್ದರೆ ಸಕ್ಕರೆ ಇಲ್ಲದ 3 ಏಲಕ್ಕಿ ಚಹಾಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಲ್ಲಿ ಏಲಕ್ಕಿ ಚಹಾ ಮಾಡುವ ವಿಧಾನ ತಿಳಿಸಲಾಗಿದೆ ನೋಡಿ…
ಏಲಕ್ಕಿ ಮತ್ತು ಹಾಲಿನ ಚಹಾ
ನೀವು ಮಧುಮೇಹ ರೋಗಿಯಾಗಿದ್ದರೆ ಏಲಕ್ಕಿ ಮತ್ತು ಹಾಲಿನ ಚಹಾ ಮಾಡುವುದು ಹೇಗೆಂದು ತಿಳಿಯೋಣ. ಒಂದು ಕಪ್ ಹಾಲಿನ ಚಹಾ ತಯಾರಿಸಲು ಮೊದಲು ಒಂದು ಕಪ್ ನೀರನ್ನು ಕುದಿಸಿ. ನಂತರ ಅದಕ್ಕೆ ಪುಡಿಮಾಡಿಟ್ಟುಕೊಂಡ ಒಂದು ಏಲಕ್ಕಿ ಸೇರಿಸಿ ನಂತರ ಚಹಾ ಎಲೆಗಳನ್ನು ಹಾಕಿ. ಇದು ಕುದಿ ಬರುತ್ತಿದ್ದಂತೆ ನಿಮ್ಮ ರುಚಿಗೆ ಅನುಗುಣವಾಗಿ ಹಾಲು ಸೇರಿಸಿ.
ಹಾಲು ಸೇರಿಸಿದ ನಂತರ ಚಹಾವನ್ನು ಚೆನ್ನಾಗಿ ಕುದಿಸಿ. ಚಹಾದ ರುಚಿ ಹೆಚ್ಚಿಸಲು ಮತ್ತು ಚಹಾ ಹೆಚ್ಚು ಪೌಷ್ಟಿಕತೆಯಿಂದ ಕೂಡಿರಲು ನೀವು ಶುಂಠಿ ಮತ್ತು ತುಳಸಿ ಎಲೆಗಳನ್ನು ಕೂಡ ಸೇರಿಸಬಹುದು. ಸಿಹಿ ರುಚಿ ಬರಲು ನೀವು ಸ್ಟೀವಿಯಾ ಸೇರಿಸಬಹುದು. ಈಗ ನಿಮ್ಮ ಏಲಕ್ಕಿ ಚಹಾ ಸಿದ್ಧವಾಗಿದೆ. ಅದನ್ನು ಬಿಸಿಯಾಗಿರುವಲೇ ಕುಡಿಯಿರಿ.
ಏಲಕ್ಕಿ ಮತ್ತು ಕರಿಮೆಣಸು ಚಹಾ
ಏಲಕ್ಕಿ ಮತ್ತು ಕರಿಮೆಣಸು ಚಹಾ ತಯಾರಿಸಲು ಮೊದಲು 1 ಕಪ್ ನೀರು ಕುದಿಸಿ. ಈಗ ಕುದಿಯುವ ನೀರಿನಲ್ಲಿ ಪುಡಿಮಾಡಿದ 2 ಏಲಕ್ಕಿ, 2 ಚಿಟಿಕೆ ಕರಿಮೆಣಸು ಪುಡಿ ಮತ್ತು ಸಣ್ಣ ತುಂಡು ದಾಲ್ಚಿನ್ನಿ ಹಾಕಿ. ಚಹಾವನ್ನು ಕುದಿಯಲು ಬಿಡಿ, ನಂತರ ಉರಿ ಕಡಿಮೆ ಮಾಡಿ. ನಿಮಗೆ ಬೇಕಾದಲ್ಲಿ ನೀವು ಹಾಲನ್ನು ಸೇರಿಸಬಹುದು. ಆದರೆ ಇದು ಹಾಲಿಲ್ಲದೆ ಉತ್ತಮ ರುಚಿ ನೀಡುತ್ತದೆ. ಈಗ, ಚಹಾವನ್ನು ಸೋಸಿ, ಕುಡಿಯುತ್ತಾ ಆನಂದಿಸಿ.