ರಿಷಿ ನಟನೆಯ ಸಿನಿಮಾದ ಮೂಲಕ ನಿರ್ದೇಶಕರಾದ ಡೈಲಾಗ್ ರೈಟರ್ ಪ್ರಶಾಂತ್ ರಾಜಪ್ಪ

ಚಲನಚಿತ್ರ

ಸ್ಯಾಂಡಲ್ ವುಡ್ ನಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿರುವ ಪ್ರಶಾಂತ್ ರಾಜಪ್ಪ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ ಪ್ರಶಾಂತ್ ರಾಜಪ್ಪ ಇದೀಗ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ಪ್ರಶಾಂತ್ ರಾಜಪ್ಪ ಇದೀಗ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.

ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸು. ಆ ಕನಸೀಗ ನನಸಾಗುವ ಹಂತಕ್ಕೆ ಬಂದಿದೆ. ಸಿನಿಮಾ ಬರಹಗಾರನಾಗಿ, ನಿರ್ದೇಶಕರಾದ ಗುರು ಪ್ರಸಾದ್, ಪಿ.ಸಿ. ಶೇಖರ್, ಹೆಚ್. ಪಿ. ದಾಸ್ ಜೊತೆ ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರಕ್ಕೆ ಧಾರೆ ಎರೆಯುತ್ತಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುವುದರ ಮೂಲಕ ಡೈರೆಕ್ಟರ್ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ.

‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಖ್ಯಾತಿಯ ನಟ ರಿಷಿ ನಟನೆಯ ಸಿನಿಮಾಗೆ ಪ್ರಶಾಂತ್ ರಾಜಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾದ ಟೈಟಲ್, ತಾರಾಬಳಗದ ಕುರಿತು ರಿವೀಲ್ ಮಾಡೋದಾಗಿ ಪ್ರಶಾಂತ್ ರಾಜಪ್ಪ ಹೇಳಿದ್ದಾರೆ.