ಚಿಕ್ಕಮಗಳೂರು: ರಾಜ್ಯದ ಗಮನ ಸೆಳೆದಿದ್ದ ವಿಧಾನಸಭೆ ಕ್ಷೇತ್ರದಲ್ಲಿಆಪ್ತರಿಬ್ಬರ ಸೆಣಸಾಟದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಲನುಭವಿಸಿದ್ದಾರೆ. ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿದ್ದ, ಆರ್ಎಸ್ಎಸ್ನ ನಿಕಟ ಸಂಪರ್ಕ ಹೊಂದಿದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ.ರವಿ ಸ್ಪರ್ಧಿಸುತ್ತಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಈ ಬಾರಿ ರಾಷ್ಟ್ರದ ಗಮನ ಸೆಳೆದಿತ್ತು. ಆದರಲ್ಲೂಸಿ.ಟಿ.ರವಿ ವಿರುದ್ಧ ಮುನಿಸಿಕೊಂಡು ಆಪ್ತ ಎಚ್.ಡಿ. ತಮಯ್ಯ ಎದುರಾಳಿಯಾಗಿದ್ದು ಕುತೂಹಲಕ್ಕೂ ಕಾರಣವಾಗಿತ್ತು. ಈ ಕುತೂಹಲಕ್ಕೆ ಮೇ 13 ರ ಫಲಿತಾಂಶದಿಂದ ತೆರೆಬಿದ್ದಿದೆ.
ಈ ಬಾರಿಯ ಚುನಾವಣೆಯೊಂದಿಗೆ 6ನೇ ಬಾರಿ ಸ್ಫರ್ಧೆಗಿಳಿದಿದ್ದ ಸಿ.ಟಿ.ರವಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿ 5ನೇ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಆಪ್ತನೇ ಸಿ.ಟಿ.ರವಿ ಅವರ 5ನೇ ಗೆಲುವಿಗೆ ತಣ್ಣಿರೇರಚಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದ ಮೂರೇ ತಿಂಗಳಲ್ಲಿ ಟಿಕೆಟ್ ಗಿಟ್ಟಿಸಿ ಅಖಾಡಕ್ಕೆ ಇಳಿದು ಸಿ.ಟಿ.ರವಿ ಅವರನ್ನು ಮಣಿಸಿ ಇದೇ ಮೊದಲ ಬಾರಿ ವಿಧಾನಸೌಧ ಮೆಟ್ಟಿಲು ಏರಿದ್ದಾರೆ.
2018-23ರ ಪ್ಲೆಸ್-ಮೈನಸ್
ಕಳೆದ ಚುನಾವಣೆಯಲ್ಲಿಎಲ್ಲ ವಿಚಾರದಲ್ಲೂ ಸಿ.ಟಿ.ರವಿಗೆ ಪ್ಲಸ್ ಆಗಿ ಪರಿವರ್ತನೆಯಾಗಿತ್ತು. ಪಕ್ಷದಲ್ಲಿನ ಒಗ್ಗಟ್ಟು, ಜನಾಭಿಪ್ರಾಯ ಸಿ.ಟಿ.ರವಿ ಅವರ ಪರವಾಗಿತ್ತು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್. ಶಂಕರ್ ಕ್ಷೇತ್ರದಲ್ಲಿ ನಿಕಟ ಸಂಪರ್ಕ ಹೊಂದಿರದಿರುವುದು ಸಿ.ಟಿ.ರವಿಗೆ ಅನುಕೂಲಕರವಾಗಿತ್ತು. ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್ ಲಿಂಗಾಯತ ಸಮುದಾಯ ಪ್ರತಿನಿಧಿಸಿದ್ದರಿಂದ ಸಮುದಾಯದ ಮತಗಳು ವಿಭಜನೆಯಾಗಿ, ರವಿ ಗೆಲುವು ಸುಲಭವಾಗಿತ್ತು.
2018ರ ಚುನಾವಣೆಗೆ ಹೋಲಿಸಿದಲ್ಲಿ 2023ರ ಚುನಾವಣೆ ಸಿ.ಟಿ.ರವಿಗೆ ಕಗ್ಗಂಟಾಗಿ ಪರಿಣಮಿಸಿತು. ಕಾರಣ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲಎಂಬತಾಗಿತ್ತು. ಅಭ್ಯರ್ಥಿ ಇದ್ದರೂ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಕಾಂಗ್ರೆಸ್ ಪರ ಮತ ನೀಡಲು ಕರೆಕೊಟ್ಟಿದ್ದು, ಸಿ.ಟಿ.ರವಿಗೆ ಮೈನಸ್ ಆಗಿತ್ತು. ಹಾಗೇ ಜಿಲ್ಲೆಯ ವಿವಿಧ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿ ಸಿ.ಟಿ.ರವಿ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದರಿಂದ ಪರಿಸ್ಥಿತಿ ನುಂಗಲಾರದ ತುತ್ತಾಯಿತು.
ಗೆಲುವು ಸೋಲಿಗೆ ಕಾರಣವಾದ ಅಂಶಗಳು
ಕಾಂಗ್ರೆಸ್ನ ಎಚ್.ಡಿ.ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಜಾತಿಯ ಬಲ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮೂರು ತಿಂಗಳಲ್ಲಿ ಟಿಕೆಟ್ ಪಡೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿನ ಒಡಕು ನಿವಾರಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದು, ಜೆಡಿಎಸ್ ಮುಖಂಡರು ಕಾಂಗ್ರೆಸ್ ಬೆಂಬಲಕ್ಕೆ ನಿಂತದ್ದು, ತಮ್ಮಯ್ಯ ಗೆಲುವಿಗೆ ಪ್ಲಸ್ ಆಯಿತು. ಸಿ.ಟಿ.ರವಿ ಅವರು ಕ್ಷೇತ್ರಕ್ಕೆ ಒತ್ತು ನೀಡದೆ ರಾಷ್ಟ್ರ ರಾಜಕಾರಣದಲ್ಲಿ ಬ್ಯೂಸಿಯಾಗಿದ್ದು, ಬಿಜೆಪಿಯಲ್ಲಿ ಮೇಲ್ಸ್ತರಕ್ಕೆ ಏರುತ್ತಿದ್ದಂತೆ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟ ಪರಿಣಾಮ ಸಮುದಾಯಗಳನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಸಿ.ಟಿ.ರವಿ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಬೆಳೆಯದ ಪರ್ಯಾಯ ನಾಯಕತ್ವ
20ವರ್ಷ ಶಾಸಕರಾಗಿದ್ದ ಸಿ.ಟಿ.ರವಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ಸಾಧಿಸಿದ್ದರಿಂದ ಇದು ಜನಾಕ್ರೋಶಕ್ಕೆ ಕಾರಣವಾಗಿತ್ತು. 20 ವರ್ಷದಲ್ಲಿಸಿ.ಟಿ.ರವಿ ತಮ್ಮ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವ ಬೆಳೆಸಲಿಲ್ಲ. ಕಾರ್ಯಕರ್ತರು ಸಣ್ಣಪುಟ್ಟ ಹುದ್ದೆಗಳಿಗಷ್ಟೇ ಸೀಮಿತವಾದರು. ಸಂಬಂಧಿಯೊಬ್ಬರು ಗುತ್ತಿಗೆ ಪಡೆದುಕೊಳ್ಳುತ್ತಿದ್ದ ಆರೋಪವೂ ಸಿ.ಟಿ.ರವಿ ಅವರಿಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿತು. ಇದೆಲ್ಲದರ ಪರಿಣಾಮ ಚಿಕ್ಕಮಗಳೂರು ಕ್ಷೇತ್ರದಲ್ಲಿ20 ವರ್ಷಗಳ ನಂತರ ಹೊಸ ಮುಖವಾದ ಎಚ್.ಡಿ.ತಮ್ಮಯ್ಯ ಅವರು ವಿಧಾನಸೌಧ ಮೆಟ್ಟಿಲು ಏರುವ ದಾಖಲೆ ಸೃಷ್ಟಿಯಾಗಿದೆ.