ಪ್ರೀತಿಸಿ ಮದುವೆಯಾಗಿದ್ದು ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ನಾಲ್ಕವೇ ವರ್ಷಕ್ಕೆ ದೂರ ದೂರವಾಗಿದ್ದಾರೆ. ಈ ಬೆನ್ನಲ್ಲೇ ಜೋಡಿಯ ಬಗ್ಗೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಸದ್ಯ ಚಂದನ್ ಶೆಟ್ಟಿಯಿಂದ ನಿವೇದಿತಾ ಗೌಡ ಜೀವನಾಂಶ ಪಡೆದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಚಂದನ್ ಅವರ ಲಾಯರ್ ಅನಿತಾ ಸ್ಪಷ್ಟನೆ ನೀಡಿದ್ದಾರೆ.
ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಬ್ಬರೂ ವೃತ್ತಿಜೀವನದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ, ಯಾರೂ ಜೀವನಾಂಶ ಕೇಳಿಲ್ಲ. ತುಂಬಾ ಗೌರವಯುತವಾಗಿ ದಾಂಪತ್ಯ ಜೀವನದಿಂದ ಇಬ್ಬರೂ ಹೊರಗೆ ಬಂದಿದ್ದಾರೆ. ಇಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಗೌರವ ಇದೆ ಎಂದು ಮಾಧ್ಯಮಗಳ ಮುಂದೆ ಲಾಯರ್ ಅನಿತಾ ಹೇಳಿದ್ದಾರೆ. ಡಿವೋರ್ಸ್ ಪ್ರಕ್ರಿಯೆ ವೇಳೆ, ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ಸಾಮಾನ್ಯ. ಆದರೆ, ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ಗೌಡ ಜೀವನಾಂಶ ಕೇಳಿಲ್ಲ ಎಂದು ಲಾಯರ್ ಅನಿತಾ ಸ್ಪಷ್ಟಪಡಿಸಿದ್ದಾರೆ.
ಒಂದು ವರ್ಷದ ಹಿಂದೆಯೇ ವಿಚ್ಛೇದನದ ಬಗ್ಗೆ ನಿವೇದಿತಾ ಮತ್ತು ಚಂದನ್ ಶೆಟ್ಟಿ ತೀರ್ಮಾನ ಮಾಡಿದ್ದರು. ಇಬ್ಬರ ಪೋಷಕರೂ ಇಬ್ಬರನ್ನೂ ಒಂದು ಮಾಡಲು ಪ್ರಯತ್ನಿಸಿದ್ದರು. ಆದರೆ, ರಾಜಿ ಸಂಧಾನ ಸಾಧ್ಯವಾಗಿಲ್ಲ ಎಂದು ಲಾಯರ್ ತಿಳಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಪರಿಚಿತರಾದವರು ಚಂದನ್ ಹಾಗೂ ನಿವೇದಿತಾ. 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರು ದೂರ ದೂರವಾಗಿರೋದು ಅಭಿಮಾನಿಗಳಿಗೆ ಬೇಸರ ತರಿಸಿದೆ.