ಟಾಲಿವುಡ್ ಬ್ಯೂಟಿ ನಟಿ ಸಮಂತಾ ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿರುವ ನಟಿ ಇದೀಗ ತಮ್ಮ ಆರೋಗ್ಯದ ಕಡೆ ಗಮನ ವಹಿಸುತ್ತಿದ್ದಾರೆ. ಡಿವೋರ್ಸ್ ನಂತರ ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ ಹಾರಿದ್ದಾರೆ.
ಅಪರೂಪದ ಕಾಯಿಲೆಯಿಂದ ಬಳುತ್ತಿರುವ ನಟಿ ಈಗಾಗಲೇ ಸಾಕಷ್ಟು ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಇದೀಗ ಹೊಸ ಮಾದರಿಯ ಆಮ್ಲಜನಕ ಥೆರಪಿಗೆ ಒಳಗಾಗಿದ್ದಾರೆ. ಇದರ ಫೋಟೋವನ್ನ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಚ್ಬಿಓಟಿ ಹೆಸರಿನ ಚಿಕತ್ಸೆಯನ್ನು ಸಮಂತಾ ಪಡೆದುಕೊಳ್ಳುತ್ತಿದ್ದಾರೆ. ಎಚ್ಬಿಓಟಿ ಎಂದರೆ ಹೈಪರ್ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ. ಈ ಚಿಕಿತ್ಸೆಯಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ಪ್ರಾರಂಭವಾಗುತ್ತವೆ. ಸದ್ಯ ಸಮಂತಾ ಆಮ್ಲಜನಕ ಚಿಕಿತ್ಸೆಗೆ ಒಳಗಾಗಿದ್ದು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.