ಬೆಂಗಳೂರು: ಧಾರವಾಡಕ್ಕೆ (Dharwad) ಪ್ರವೇಶ ನೀಡಬಾರದು ಎಂಬ ಸುಪ್ರೀಂ ಕೋರ್ಟ್ (Supreme Court) ಆದೇಶ ಗೊತ್ತಿದ್ದರೂ ಹೈಕಮಾಂಡ್ ಅಲ್ಲಿಂದ ಚುನಾವಣೆಗೆ (Election) ಸ್ಪರ್ಧಿಸುವಂತೆ ನಿಮ್ಮ ಕಕ್ಷಿದಾರರಿಗೆ ಟಿಕೆಟ್ ಕೊಟ್ಟಿದ್ಯಾ ಎಂದು ವಿನಯ್ ಕುಲಕರ್ಣಿ (Vinay Kulkarni) ಪರ ವಕೀಲರಿಗೆ ಹೈಕೋರ್ಟ್ (High Court) ಪ್ರಶ್ನಿಸಿ ಚಾಟಿ ಬೀಸಿದೆ.
ಧಾರವಾಡ ಪ್ರವೇಶಕ್ಕೆ ನಿರಾಕರಿಸಿದ ಜನಪ್ರತಿನಿಧಿಗಳ ಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಧಾರವಾಡ ಪ್ರವೇಶಿಸದಂತೆ ಸೂಚಿಸಿದೆ.
ವಿನಯ್ ಕುಲಕರ್ಣಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದು ಧಾರವಾಡದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಧಾರವಾಡ ಪ್ರವೇಶಿಸದಂತೆ ಈ ಹಿಂದೆ ಆದೇಶ ನೀಡಿತ್ತು. ಈಗ ಚುನಾವಣಾ ಪ್ರಚಾರಕ್ಕೆ ಅನುಕೂಲವಾಗುವಂತೆ ಧಾರವಾಡಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸುವ ವೇಳೆ ಕೋರ್ಟ್ ಕುಲಕರ್ಣಿ ಪರ ವಕೀಲರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.
ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಏ.15 ರಂದು ವಿನಯ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್ ಏಪ್ರಿಲ್ 18 ರಂದು ಧಾರವಾಡ ಪ್ರವೇಶಿಸದಂತೆ ಆದೇಶ ನೀಡಿತ್ತು.
ಯೋಗೇಶ್ ಗೌಡ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ವಿನಯ್ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ ಆದೇಶ ದುರುಪಯೋಗವಾಗಬಹುದು. ಮುಂದೆ ವಿಚಾರಣೆಗೆ ಸಮಸ್ಯೆಯಾಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ಬಲವಾದ ವಾದ ಮಂಡಿಸಿದ್ದರು.
ಸುಪ್ರೀಂ ಷರತ್ತು
ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. ಜಾಮೀನು ಮಂಜೂರು ಮಾಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು. ಆದರೆ ಅನಿವಾರ್ಯ ಇದ್ದಾಗ ಮಾತ್ರ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದ ಕಾರಣ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿ ಪ್ರವೇಶಕ್ಕೆ ಮನವಿ ಮಾಡಿದ್ದರು