ಬೆಂಗಳೂರು: ಆರ್ಎಸ್ಎಸ್ ಹಿನ್ನೆಲೆಯಿರುವ ವ್ಯಕ್ತಿಯ ಪರ ಸೋನಿಯಾ ಗಾಂಧಿ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಪರ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಿದ್ದ ಸೋನಿಯಾ ಗಾಂಧಿ ವಿರುದ್ಧ ಓವೈಸಿ ಕಿಡಿಕಾರಿದರು.
ಸೋನಿಯಾ ಗಾಂಧಿಯವರು RSS ಪರ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಜಗದೀಶ್ ಶೆಟ್ಟರ್ ಆರ್ಎಸ್ಎಸ್ನವರು. ಈ ರೀತಿ ಪ್ರಚಾರದಿಂದಾಗಿ ಕಾಂಗ್ರೆಸ್ ಸೈದ್ಧಾಂತಿಕವಾಗಿ ಸೋತಿದೆ. ಇದು ಜಾತ್ಯತೀತತೆಗಾಗಿ ನಿಮ್ಮ ಹೋರಾಟವೇ? ನೀವು ಮೋದಿ ವಿರುದ್ಧ ಹೀಗೆಯೇ ಹೋರಾಡುತ್ತೀರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಜೋಕರ್ಗಳು, ಗುಲಾಮರು ಮತ್ತು ಸೇವಕರು ನಮ್ಮನ್ನು ಆರೋಪಿಗಳಾಗಿ ಮಾಡುತ್ತಿದೆ. ಅಷ್ಟೇ ಅಲ್ಲದೇ ನಮ್ಮ ಪಕ್ಷವನ್ನು ಬಿಜೆಪಿಯ ಬಿ- ಟೀಮ್ ಎಂದು ಪರಿಗಣಿಸುತ್ತಾರೆ ಎಂದು ಗುಡುಗಿದರು.