ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ದೇಶದಲ್ಲಿ ಹೆಚ್ಚು ಆದ್ಯತೆಯ ಪಾವತಿ ಕಾರ್ಯವಿಧಾನವಾಗುತ್ತಿರುವುದರಿಂದ ಡಿಜಿಟಲ್ ವಹಿವಾಟು ಶೀಘ್ರದಲ್ಲೇ ನಗದು ವಹಿವಾಟನ್ನು ಮೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಡಿಜಿಟಲ್ ಪಾವತಿ ವಿಧಾನ ಯುಪಿಐ ಮತ್ತು ಸಿಂಗಾಪುರ ದೇಶದ ಪೇನೌ ನಡುವಿನ ಗಡಿಯಾಚೆಗಿನ ಡಿಜಿಟಲ್ ಹಣ ಪಾವತಿ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿಯವರು, 2022ರಲ್ಲಿ ಯುಪಿಐ ಮೂಲಕ ಸುಮಾರು 2 ಟ್ರಿಲಿಯನ್ ಸಿಂಗಾಪುರ್ ಡಾಲರ್ ಅಂದರೆ ಸುಮಾರು 126 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚು ಮೊತ್ತದ 74 ಬಿಲಿಯನ್ ವಹಿವಾಟುಗಳನ್ನು ಮಾಡಲಾಗಿದೆ ಎಂದು ಹೇಳಿದರು.
“ಅನೇಕ ತಜ್ಞರು ಶೀಘ್ರದಲ್ಲೇ ಭಾರತದ ಡಿಜಿಟಲ್ ವ್ಯಾಲೆಟ್ ವಹಿವಾಟುಗಳು ನಗದು ವಹಿವಾಟುಗಳನ್ನು ಹಿಂದಿಕ್ಕಲಿವೆ ಎಂದು ಅಂದಾಜಿಸಿದ್ದಾರೆ” ಎಂದು ಹೇಳಿದರು. UPI ಮೂಲಕ ಹೆಚ್ಚಿನ ಸಂಖ್ಯೆಯ ವಹಿವಾಟುಗಳು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಪಾವತಿ ವ್ಯವಸ್ಥೆಯು ಅತ್ಯಂತ ಸುರಕ್ಷಿತವಾಗಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.