ಬೆಂಗಳೂರು: ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅವರ ಪಾರ್ಥಿವ ಶರೀರ ಮಧ್ಯ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ನಿವಾಸಕ್ಕೆ ಗಣ್ಯರು ಹಾಗೂ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಜಮಾಯಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರ ನಿವಾಸಕ್ಕೆ ಆಗಮಿಸುತ್ತಿದ್ಷಂತೆಯೇ ನಟ ಶಿವರಾಜಕುಮಾರ್(Shivarajkumar) , ಪತ್ನಿ ಗೀತಾ ಶಿವರಾಜಕುಮಾರ್, ನಟಿ ಅನು ಪ್ರಭಾಕರ್, ಸಂಗೀತ ನಿರ್ದೇಶಕ ಗುರುಕಿರಣ್, ನಟ ವಿಕ್ರಮ್ ಸೂರಿ ಅನು ಪ್ರಭಾಕರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.
ಪುತ್ರ ಶೌರ್ಯ ಜೊತೆ ಪತ್ನಿಯ ಮೃತದೇಹದೊಂದಿಗೆ ಆಗಮಿಸಿದ ವಿಜಯ ರಾಘವೇಂದ್ರ ಕಂಡು ಅಭಿಮಾನಿಗಳು ಕಣ್ಣೀರಿಟ್ಟರು. ಅಂತಿಮ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಜನಸಾಗರ ಹರಿದು ಬಂದಿತ್ತು. ಅನೇಕರು ಸ್ಪಂದನಾ ಕುಟುಂಬಕ್ಕೆ ಮತ್ತು ವಿಜಯ ರಾಘವೇಂದ್ರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಸಂಬಂಧಿಕರ ಜೊತೆ ವಾರದ ಹಿಂದೆಯೇ ಬ್ಯಾಂಕಾಕ್ ಗೆ ತೆರಳಿದ್ದ ಸ್ಪಂದನಾಗೆ ಭಾನುವಾರವೇ ಹೃದಯಾಘಾತವಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಅವರು ಬ್ಯಾಕಾಂಕ್ ಆಸ್ಪತ್ರೆಯಲ್ಲೇ ನಿಧರಾಗಿದ್ದರು. ಅಲ್ಲಿನ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮಂಗಳವಾರ ಸ್ಪಂದನಾ ಅವರ ಮೃತದೇಹವನ್ನು ನಿನ್ನೆ ರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ.