ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅನಾರೋಗ್ಯದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡಿದ್ದರು ಎಂದು ಆರ್ಸಿಬಿ (RCB)ಕೋಚ್ ಸಂಜಯ್ ಬಾಂಗರ್ ಪಂದ್ಯದ ಬಳಿಕ ಬಹಿರಂಗಪಡಿಸಿದ್ದಾರೆ.
ಔಟ್ ಆಗಿ ಡಗ್ಔಟ್ಗೆ ಮರಳುತ್ತಿದ್ದ ವೇಳೆ ದಿನೇಶ್ ಕಾರ್ತಿಕ್ (Dinesh Karthik)ಹಲವು ಬಾರಿ ಕೆಮ್ಮಿದ್ದರು ಹಾಗೂ ವಾಂತಿ ಕೂಡ ಮಾಡಿಕೊಂಡಿದ್ದರು. ಅಂದ ಹಾಗೆ ಪಂದ್ಯದ ಬಳಿಕ ಆರ್ಸಿಬಿ ಕೋಚ್ ಸಂಜಯ್ ಬಾಂಗರ್ ಅವರು ದಿನೇಶ್ ಕಾರ್ತಿಕ್ ಆರೋಗ್ಯದ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ತಿಕ್ ಆನಾರೋಗ್ಯದ ಹೊರತಾಗಿಯೂ ಕ್ರೀಸ್ಗೆ ತೆರಳಿ ಬ್ಯಾಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
“ದಿನೇಶ್ ಕಾರ್ತಿಕ್ ಕ್ರೀಸ್ನಲ್ಲಿ ಬ್ಯಾಟ್ ಮಾಡುತ್ತಿರುವ ವೇಳೆ ಅವರು ಅಸ್ವಸ್ಥರಾದರು. ಅವರು ಸ್ವಲ್ಪಮಟ್ಟಿಗೆ ನಿರ್ಜಲೀಕರಣ ಗೊಂಡಿ ದ್ದರು ಹಾಗೂ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳುವ ವೇಳೆ ಡಗ್ಔಟ್ ಸಮೀಪ ವಾಂತಿ ಕೂಡ ಮಾಡಿಕೊಂಡಿದ್ದರು. ಮುಂದಿನ ಪಂದ್ಯಕ್ಕೆ ನಮಗೆ ಸಾಕಷ್ಟು ಅಂತರ ಇದೆ. ಹಾಗಾಗಿ, 3-4 ದಿನಗಳ ಕಾಲ ಔಷಧಿ ತೆಗೆದುಕೊಂಡರೆ ಅವರು ಸರಿಯಾ ಗುತ್ತಾರೆ,” ಎಂದು ಪಂದ್ಯದ ಬಳಿಕ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿನೇಶ್ ಕಾರ್ತಿಕ್ ಅತ್ಯಂತ ಪ್ರಮುಖ ಆಟಗಾರ. ತಂಡ ಪ್ಲೇಆಫ್ಸ್ ಪ್ರವೇಶಿಸುವ ಹಾದಿಯಲ್ಲಿ ದಿನೇಶ್ ಕಾರ್ತಿಕ್ ಪಾತ್ರ ಕೂಡ ನಿರ್ಣಾಯಕವಾಗಲಿದೆ,” ಎಂದು ಇದೇ ವೇಳೆ ದಿನೇಶ್ ಕಾರ್ತಿಕ್ ಅವರ ಮಹತ್ವದ ಬಗ್ಗೆ ಸಂಜಯ್ ಬಾಂಗರ್ ಹೇಳಿದ್ದಾರೆ.