ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ತಾವು ವಾಸವಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ಮೊದಲ ಪತ್ನಿಯಿಂದ ದೂರವಾಗಿದ್ದ ಗುರುಪ್ರಸಾದ್ ಎರಡನೇ ಮದುವೆಯಾಗಿದ್ದರು. ಜಗ್ಗೇಶ್, ಧನಂಜಯ್ ಮುಂತಾದ ಕಲಾವಿದರ ಜೊತೆ ಕೆಲಸ ಮಾಡಿದ್ದ ಗುರುಪ್ರಸಾದ್ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದರು. ಮೇಲ್ನೋಟಕ್ಕೆ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಂತಿದ್ದರು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಗುರುಪ್ರಾಸ್ ಸಾವಿನ ಬಗ್ಗೆ 4 ಪ್ರಮುಖ ಅನುಮಾನಗಳು ಕಂಡು ಬಂದಿದೆ.
- ನಿರ್ದೇಶಕ ಗುರುಪ್ರಸಾದ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಸಾಲ ಕೊಟ್ಟವರಿಂದ ಅವರಿಗೆ ಕಾಟ ಹೆಚ್ಚಿತ್ತು ಎಂಬ ಮಾಹಿತಿ ಇದೆ. ಅಂದಾಜು ಮೂರು ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಗುರುಪ್ರಸಾದ್ ಸಿಲುಕಿದ್ದರು. ಈ ಕಾರಣದಿಂದ ಅವರು ಪದೇಪದೇ ಮನೆ ಬದಲಾವಣೆ ಮಾಡುತ್ತಿದ್ದರು ಎನ್ನಲಾಗಿದೆ.
- ಇತ್ತೀಚಿನ ವರ್ಷಗಳಲ್ಲಿ ಗುರು ಪ್ರಸಾದ್ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ‘ಎದ್ದೇಳು ಮಂಜುನಾಥ 2’ ಸಿನಿಮಾದ ಶೂಟಿಂಗ್ ಮುಗಿದು 2 ವರ್ಷ ಕಳೆದರೂ ಬಿಡುಗಡೆ ಆಗಿಲ್ಲ. ಈ ಸಿನಿಮಾದ ನಿರ್ಮಾಣದಿಂದ ಅವರು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ.
- ನೀಡಬೇಕಿದ್ದ ಸಾಲದ ಹಣವನ್ನು ವಾಪಸ್ ನೀಡಲಾಗದೇ ಗುರುಪ್ರಸಾದ್ ಹೈರಾಣಾಗಿದ್ದರು. ಅದರ ನಡುವೆ ಅವರಿಂದ ಚೆಕ್ ಬೌನ್ಸ್ ಕೂಡ ಆಗಿತ್ತು. ಹಲವು ಕೋರ್ಟ್ ಕೇಸ್ಗಳು ಅವರ ಮೇಲೆ ಇತ್ತು. ಚೆಕ್ ಬೌನ್ಸ್ ಕೇಸ್ನಿಂದ ಅವರು ಬಂಧನದ ಭೀತಿಯಲ್ಲಿ ಇದ್ದರು. ಸಾಲ ಮರುಪಾವತಿ ಮಾಡಲಾಗದೇ, ಬಂಧನದ ಭೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದೆ.
- ಗುರುಪ್ರಸಾದ್ ಅವರ ನಿಧನದ ಹಿಂದೆ ಕೌಟುಂಬಿಕ ಕಲಹ ಕೂಡ ಇರಬಹುದು ಎಂಬ ಅನುಮಾನ ಇದೆ. ಇತ್ತೀಚೆಗೆ ಗುರುಪ್ರಸಾದ್ ಎರಡನೇ ಮದುವೆಯಾಗಿದ್ದರು. ಮೊದಲ ಪತ್ನಿಯಿಂದ ದೂರವಾಗಿದ್ದರು. 2ನೇ ಮದುವೆಯಾಗಿದ್ದರೂ ಕೂಡ ಗುರುಪ್ರಸಾದ್ ಒಬ್ಬರೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಇದರಿಂದಾಗಿ ಗುರುಪ್ರಸಾದ್ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.