ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಟಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಂದು ಸುದ್ದಿ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿರುವ ವರ್ಮಾ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಖ್ಯಾತ ನಟ ಪವನ್ ಕಲ್ಯಾಣ್ ವಿರುದ್ಧ ಚುನಾವಣೆ ಎದುರಿಸಲಿದ್ದಾರೆ. ಪವನ್ ಕಲ್ಯಾಣ್ ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡಲಿದ್ದು, ಅದೇ ಕ್ಷೇತ್ರದಲ್ಲೇ ತಾವೂ ಸ್ಪರ್ಧೆ ಮಾಡುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಪವನ್ ಕಲ್ಯಾಣ್ ಅವರಿಗೂ ವರ್ಮಾ ಅವರಿಗೂ ಶಿತಲ ಸಮರ ನಡೆಯುತ್ತಲೇ ಇದೆ. ಅದು ಸಿನಿಮಾಗಳ ಮೂಲಕ ಮತ್ತಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ಬಾರಿ ಚುನಾವಣೆಗೆ ಏನಾದರೂ ವರ್ಮಾ ನಿಂತರೆ, ಅದು ಮತ್ತೊಂದು ದಿಕ್ಕು ಪಡೆದುಕೊಳ್ಳುವುದು ಪಕ್ಕಾ ಆಗಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಮಾಡಿರುವ ಫೋಸ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದ ಮಾಡಿಕೊಳ್ಳುವ ವರ್ಮಾ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅಥವಾ ಪೋಸ್ಟ್ ಮಾಡಿ ಸೈಲೆಂಟ್ ಆಗ್ತಾರಾ ಕಾದು ನೋಡಬೇಕಿದೆ.