ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಪುಷ್ಪ 2 ಕಲೆಕ್ಷನ್ ಜೋರಾಗಿದ್ದು ಸದ್ಯದಲ್ಲೇ 1000 ಕೋಟಿ ಕ್ಲಬ್ ಸೇರಲಿದೆ. ‘ಪುಷ್ಪ’ ಸಿನಿಮಾದ ಗೆಲುವಿನ ಮೂಲಕ ನಿರ್ದೇಶಕ ಸುಕುಮಾರ್ ಬ್ಲಾಕ್ ಬಸ್ಟರ್ ನಿರ್ದೇಶಕ ಎನಿಸಿಕೊಂಡಿದ್ದು ಇದೀಗ ಸುಕುಮಾರ್ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.
ನಿರ್ದೇಶಕ ಸುಕುಮಾರ್ ‘ಆರ್ಯ’, ‘ರಂಗಸ್ಥಳಂ’, ‘100% ಲವ್’, ‘ಆರ್ಯ 2’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪುಷ್ಪ 2 ಬಳಿಕ ಸುಕುಮಾರ್ ಗೆ ಭರ್ಜರಿ ಆಫರ್ ಗಳು ಬರೋಕೆ ಶುರುವಾಗಿದೆ. ಸಾಕಷ್ಟು ಭೇಡಿಕೆ ಇರುವಾಗ್ಲೆ ಸುಕುಮಾರ್ ಕಮರ್ಶಿಯಲ್ ಸಿನಿಮಾ ಬದಲಿಗೆ ಡಾಕ್ಯುಮೆಂಟರಿ ಸಿನಿಮಾಗಳ ನಿರ್ದೇಶಕಕ್ಕೆ ಇಳಿದಿದ್ದಾರೆ.
ಸುಕುಮಾರ್, ಡಾಕ್ಯುಮೆಂಟರಿ ನಿರ್ದೇಶನ ಮಾಡಲು ಕಾರಣ ಅವರದ್ದೇ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನಿಮಾ ‘ಪುಷ್ಪ’. ರಕ್ತ ಚಂದನ ಕಳ್ಳಸಾಗಣೆದಾರನ ಸಿನಿಮಾ ಕತೆ ಹೆಣೆಯಲು ಸುಕುಮಾರ್, ರಕ್ತ ಚಂದನದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದರು. ರಕ್ತ ಚಂದನ ಎಲ್ಲಿ ಬೆಳೆಯುತ್ತದೆ, ಅದನ್ನು ಕಡಿಯುವುದು ಹೇಗೆ? ಅದನ್ನು ಹೇಗೆ ಕಳ್ಳ ಸಾಗಣೆ ಮಾಡಲಾಗುತ್ತದೆ. ಸಾಗಣೆ ಮಾಡುವ ರಕ್ತ ಚಂದನ ಎಲ್ಲಿ ಹೋಗುತ್ತದೆ, ಅದನ್ನು ಯಾರು ಖರೀದಿ ಮಾಡುತ್ತಾರೆ, ಯಾವ ವಸ್ತುಗಳನ್ನು ಮಾಡಲು ಬಳಸುತ್ತಾರೆ ಎಂದೆಲ್ಲ ಸಂಶೋಧನೆ ಮಾಡಿದ್ದರು. ಇದನ್ನೇ ಇಟ್ಟುಕೊಂಡು ಇದೀಗ ಡಾಕ್ಯುಮೆಂಟರಿ ಮಾಡಲು ಮುಂದಾಗಿದ್ದಾರೆ.
‘ಪುಷ್ಪ’ ಸಿನಿಮಾದಲ್ಲಿ ಈ ಎಲ್ಲ ಮಾಹಿತಿಗಳನ್ನು ಕತೆಯೊಳಗೆ ಸೇರಿಸಲು ಸುಕುಮಾರ್ಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗ ರಕ್ತ ಚಂದನದ ಕುರಿತಾಗಿಯೇ ಡಾಕ್ಯುಮೆಂಟರಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಸುಕುಮಾರ್. ನೆಟ್ಫ್ಲಿಕ್ಸ್ಗಾಗಿ ಈ ಡಾಕ್ಯುಮೆಂಟರಿಯನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಡಾಕ್ಯುಮೆಂಟರಿಯಲ್ಲಿ ರಕ್ತ ಚಂದನದ ಕಳ್ಳಸಾಗಣೆಯ ಇತಿಹಾಸ, ರಕ್ತ ಚಂದನ ಕಡಿಯುವ ಆಳುಗಳ ಜೀವನ ಇನ್ನೂ ಹಲವು ಮಾಹಿತಿಗಳನ್ನು ಈ ಡಾಕ್ಯುಮೆಂಟರಿ ಒಳಗೊಂಡಿರಲಿದೆ. ಡಾಕ್ಯುಮೆಂಟರಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.