ಬೆಂಗಳೂರು: ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವಂತೆ ಶೇ.75 ರಷ್ಟು ವಿಕಲಚೇತನರಾಗಿರುವ ವ್ಯಕ್ತಿಗೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ಹಾಗೂ ಮಾಸಿಕ ಜೀವನಾಂಶ ನಿರ್ವಹಣೆ ಮೊತ್ತ ಹೆಚ್ಚಳ ಕೋರಿ ಪತ್ನಿಯೂ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
” ಪತಿಯೂ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಅವರು ಉದ್ಯೋಗ ಹುಡುಕಲು ಅಸಹಾಯಕರಾಗಿದ್ದಾರೆ. ಹಾಗಾಗಿ, ಜೀವನಾಂಶ ನೀಡುವಂತೆ ನಿರ್ದೇಶನ ನೀಡಲಾಗುವುದಿಲ್ಲ,” ಎಂದು ಹೇಳಿದೆ. ಪತ್ನಿಯೂ ಸಂಪಾದನೆಗೆ ಅರ್ಹಳು ಎನ್ನುವ ಅಂಶ ಗಮನಿಸಿದ ನ್ಯಾಯಪೀಠ, ಪತಿಗೆ ನೀಡಿದ ಅಂಗವೈಕಲ್ಯ ಪ್ರಮಾಣಪತ್ರ ಉಲ್ಲೇಖಿಸಿ, ” ಅಂಗವೈಕಲ್ಯದಿಂದಾಗಿ ಪತಿ ಸಂಪಾದಿಸಲು ಅಸಮರ್ಥ ನಾಗಿದ್ದರೂ ಜೀವನಾಂಶ ನೀಡಲು ಹೆಂಡತಿ ಒತ್ತಾಯಿಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ,” ಎಂದು ಅಸಮಾಧಾನ ಹೊರಹಾಕಿದೆ.
ಜತೆಗೆ, ” ಪತಿಯಿಂದ ಭರಿಸಬೇಕಾದ ಜೀವನಾಂಶವು 19,04,000 ರೂ. ಬಾಕಿ ಇದೆ ಎಂದು ಮೆಮೊದಲ್ಲಿ ತಿಳಿಸಲಾಗಿದೆ. ಆದರೆ, ಈಗ ನ್ಯಾಯಾಲಯವು ಬಾಕಿ ಜೀವನಾಂಶ ಪಾವತಿಸಲು ನಿರ್ದೇಶಿಸಿದರೆ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇನ್ನಷ್ಟು ಚಿಂತೆಗೆ ನೂಕಿದಂತಾಗುತ್ತದೆ ” ಎಂದು ಅಭಿಪ್ರಾಯಪಟ್ಟಿದೆ
. ”ಪತಿಯ ತಂದೆ ಅಥವಾ ಅರ್ಜಿದಾರರ ತಂದೆ ಮೊಮ್ಮಗನ ಶಿಕ್ಷಣ ಮತ್ತು ಆಕೆಯ ವೃತ್ತಿ ಮತ್ತು ಮೊಮ್ಮಗನ ಜೀವನದ ಎಲ್ಲಾ ಅಗತ್ಯತೆಗಳನ್ನು ನೋಡಿಕೊಳ್ಳಬೇಕಾಗಿರುವುದು ಸೂಕ್ತವೆನಿಸುತ್ತದೆ. ಜೀವನಾಂಶವನ್ನು ಶೇ. 70ರಷ್ಟು ಹೆಚ್ಚಿಸಬೇಕೆಂಬ ಹೆಂಡತಿಯ ಹಕ್ಕು ಮೇಲ್ನೋಟಕ್ಕೆ ಸಮರ್ಥನೀಯವಲ್ಲ. ಪತಿಯ ಅಂಗವೈಕಲ್ಯದ ದಿನಾಂಕದವರೆಗಿನ ನಿರ್ವಹಣೆಯ ಬಾಕಿಯನ್ನು ಪತಿಯ ತಂದೆ ಪೂರೈಸಬೇಕು,” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ವಿಚ್ಛೇದಿತ ಪತಿಯ ತಂದೆ ಹಲವಾರು ಆಸ್ತಿಗಳನ್ನು ಹೊಂದಿದ್ದು, ಹೆಂಡತಿ ಮತ್ತು ಮಗುವಿನ ಜೀವನಾಂಶ ಪಾವತಿಸಲು ಸಮರ್ಥರಾಗಿದ್ದಾರೆ ಎಂಬ ಪತ್ನಿಯ ವಾದ ತಿರಸ್ಕರಿಸಿದ ನ್ಯಾಯಾಲಯ, ಈ ಹಂತದಲ್ಲಿ ವಾದ ಒಪ್ಪಿಕೊಳ್ಳಲಾಗುವುದಿಲ್ಲ ಎಂದಿದೆ. ಪತಿ ತನಗೆ ಶೇ.75 ರಷ್ಟು ಅಂಗವೈಕಲ್ಯ ಇರುವ ಕಾರಣ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.