ಧಾರವಾಡ: ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣಿನ ಸುಗ್ಗಿ ಮುಗಿಯುತ್ತ ಬಂದರೂ, ಅಲ್ಫಾನ್ಸೋ ಮಾವಿನ ತಳಿಗೆ ಹೆಸರಾದ ಧಾರವಾಡ ಜಿಲ್ಲೆಯಲ್ಲಿ ಸತತ 4ನೇ ವರ್ಷವೂ ಮಾವಿನ ಮೇಳ ನಡೆಯಲಿಲ್ಲ. ಇದರಿಂದ ಮಾವು ಪ್ರಿಯರಲ್ಲಿ ಹಾಗೂ ಬೆಳಗಾರರಲ್ಲಿ ನಿರಾಶೆ ಮೂಡಿದೆ. ಪ್ರತಿ ವರ್ಷ ಮೇ ತಿಂಗಳ 2 ಅಥವಾ 3ನೇ ವಾರ ಮಾವು ಮೇಳ ನಡೆಯುತ್ತದೆ. ಧಾರವಾಡದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆಯುವ ಈ ಮಾವು ಮೇಳದಲ್ಲಿ 100- 150 ಟನ್ ಮಾವು ಮಾರಾಟವಾಗಿ 1 ಕೋಟಿ ರೂ.ವರೆಗೂ ವಹಿವಾಟು ಆಗುತ್ತಿತ್ತು. ರೈತರು ಹಾಗೂ ಗ್ರಾಹಕರ ಮಧ್ಯೆ ನೇರವಾಗಿ ವ್ಯಾಪಾರದ ಸಂಪರ್ಕ ಕೊಂಡಿಯಾಗಿ ಕಳೆದ ಒಂದು ದಶಕದಿಂದ ಉತ್ತಮ ವೇದಿಕೆ ಕಲ್ಪಿಸಿದೆ ಈ ಮಾವು ಮೇಳ. ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಇದೆ.
ಒಂದು ಉತ್ಪನ್ನ ಎಲ್ಲಿ?
ಆದರೆ, ಮೂರು ವರ್ಷಗಳ ಹಿಂದೆಯೇ ರದ್ದಾಗಿದ್ದ ಈ ಮಾವು ಮೇಳ ಈವರೆಗೂ ಆರಂಭವೇ ಆಗಿಲ್ಲ. ಈ ಬಾರಿ ಮೇಳ ನಡೆಯಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಯೋಜನೆಯ ಭಾಗವಾದ ‘ಒಂದು ಜಿಲ್ಲೆ, ಒಂದು ಉತ್ಪನ್ನಧಿ’ ಕಾರ್ಯಕ್ರಮದಲ್ಲಿ ಮಾವು ಬೆಳೆಗೆ ನಿಗದಿಯಾದ ಧಾರವಾಡ ಜಿಲ್ಲೆಯಲ್ಲಿಯೇ ನಾಲ್ಕು ವರ್ಷಗಳಿಂದ ಮಾವು ಮೇಳ ನಡೆದಿಲ್ಲ. ಇದನ್ನು ಗಮನಿಸಿದರೆ ಧಾರವಾಡ ಮಾವು ಬೆಳೆಗೆ ಪ್ರಸಿದ್ಧಿಯಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕೋವಿಡ್ ನಂತರ ನಡೆದೇ ಇಲ್ಲ
2019 ಮೇ ತಿಂಗಳಲ್ಲಿ ನಡೆದ ಮೂರು ದಿನಗಳ ಮಾವು ಮೇಳಕ್ಕೆ ಗ್ರಾಹಕರು ಮತ್ತು ರೈತರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ಮಾವಿನ ಹಣ್ಣಿನ ಮಾರಾಟವೂ ಕೋಟಿ ರೂ. ದಾಟಿತ್ತು. ಇದಲ್ಲದೇ ಮಾವು ಮಾರಾಟದ ಜತೆಗೆ ಅಪರೂಪದ ವಿವಿಧ ತಳಿಯ ಮಾವುಗಳ ಪ್ರದರ್ಶನವೂ ಗಮನ ಸೆಳೆಯುತ್ತಾ ಬಂದಿದೆ. ಆದರೆ, 2020ರಲ್ಲಿ ಲಾಕ್ಡೌನ್ದಿಂದ ಸಿದ್ಧತೆ ಮಾಡಿಕೊಂಡಿದ್ದ ಮಾವು ಮೇಳ ನಡೆಯಲಿಲ್ಲ. 2021ರಲ್ಲಿ ಲಾಕ್ಡೌನ್ ಕಫ್ರ್ಯೂವಿನ ಕಾರಣ ಮೇಳಕ್ಕೆ ಹೊಡೆತ ಬಿದ್ದಿತ್ತು. 2022ರಲ್ಲಿ ಮಾವು ಬೆಳೆಗಾರರ ಒತ್ತಾಸೆಯಿಂದ ತೋಟಗಾರಿಕೆ ಇಲಾಖೆ ಕೂಡ ಕೃಷಿ ಮೇಳದ ಜತೆಯಲ್ಲಿ ಮಾವು ಮೇಳ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕೃಷಿ ಮೇಳ ಮುಂದೂಡಿದ ಕಾರಣ ಮಾವು ಮೇಳ ರದ್ದಾಗುವಂತಾಗಿತ್ತು.
ಈ ಬಾರಿ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿಯೇ ಮಾವು ಮೇಳ ಆಯೋಜಿಸಲು ನಿರ್ಧರಿಸಿತ್ತು. ಆದರೆ, ಮಾವು ಇಳುವರಿ ಕುಸಿತ, ಅನುದಾನದ ಕೊರತೆ ನೆಪ ಹೇಳಿ, ಮಾವು ಮೇಳ ಇಲ್ಲದಂತಾಗಿದೆ ಎನ್ನುತ್ತಾರೆ ಮಾವು ಬೆಳೆಗಾರರು. ಸದ್ಯ ಮಾವು ಮೇಳದ ನಿರೀಕ್ಷೆಯಲ್ಲಿದ್ದ ಮಾವು ಪ್ರಿಯರಿಗೆ ಈ ಸಲವೂ ಮೇಳ ರದ್ದಾಗಿರುವುದು ನಿರಾಸೆ ಮೂಡಿಸಿದ್ದಂತೂ ಸುಳ್ಳಲ್ಲ.
‘ಮ್ಯಾಂಗೋ ಟೂರಿಸಂ’ಗೂ ಬ್ರೇಕ್
ಮಾವು ಮೇಳದ ಯಶಸ್ಸಿನಿಂದ ಪ್ರೋತ್ಸಾಹ ಪಡೆದಿದ್ದ ತೋಟಗಾರಿಕೆ ಇಲಾಖೆ ಮಾವು ಮೇಳದ ಜತೆ ಜತೆಗೆ ‘ಮ್ಯಾಂಗೋ ಟೂರಿಸಂ’ ಎಂಬ ಹೊಸ ಕಲ್ಪನೆಯನ್ನೂ ಪರಿಚಯಿಸಿತ್ತು. ಈ ಕಲ್ಪನೆ ಅಡಿ ಗ್ರಾಹಕರು ನೇರವಾಗಿ ಮಾವು ಬೆಳೆದ ರೈತರ ತೋಟಕ್ಕೆ ತೆರಳಿ ಖರೀದಿ ಮಾಡಬಹುದಾಗಿತ್ತು. ಆದರೆ, ಇದಕ್ಕೆ ಸ್ಪಂದನೆ ಇಲ್ಲದೇ ಟೂರಿಸಂಗೆ ಬ್ರೇಕ್ ಬಿತ್ತು.
ಕುಸಿದ ಮಾವಿನ ಫಸಲು
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯ, ಹೂವು ಉದುರಿ ಹೋಗಿದ್ದರಿಂದ ಗಣನೀಯ ಪ್ರಮಾಣದಲ್ಲಿ ಮಾವಿನ ಇಳುವರಿ ಕುಸಿತ ಕಂಡಿದೆ. ಇದಲ್ಲದೇ ಅಕಾಲಿಕ ಮಳೆ, ಆಲಿಕಲ್ಲಿನ ಮಳೆಯಿಂದ ಮಾವಿನ ಕಾಯಿಗಳು ಉದುರಿದ ಪರಿಣಾಮ ಶೇ.25ರಷ್ಟೇ ಇಳುವರಿ ಬಂದಿದೆ ಎನ್ನುತ್ತಾರೆ ರೈತರು.