ನವದೆಹಲಿ: ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ಚೇತರಿಸಿಕೊಂಡಿದ್ದು, ಬುಧವಾರ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೆಲವು ವಾರಗಳ ಕಾಲ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಮಾರ್ಚ್ 17ರಂದು ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸಂಗೀತಾ ರೆಡ್ಡಿ ಈ ಕುರಿತು ಮಾತನಾಡಿ,
ಅವರ ಚೇತರಿಕೆ ಮತ್ತು ಗುಣಮುಖದ ಬಗ್ಗೆ ವೈದ್ಯರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸದ್ಗುರು ಅವರು ಚೇತರಿಸಿಕೊಳ್ಳುತ್ತಿರುವಾಗಲೂ ಅದೇ ಮನೋಭಾವವನ್ನು ಉಳಿಸಿಕೊಂಡಿದ್ದಾರೆ. ಜಾಗತಿಕ ಒಳಿತಿಗಾಗಿ ಅವರ ಬದ್ಧತೆ, ಅವರ ತೀಕ್ಷ್ಣ ಮನಸ್ಸು ಮತ್ತು ಅವರ ಹಾಸ್ಯಪ್ರಜ್ಞೆ ಎಲ್ಲವೂ ಅಖಂಡವಾಗಿದೆ ಎಂದರು.
ಮಾರ್ಚ್ 15 ರಂದು ಸದ್ಗುರುಗಳಿಗೆ ಎಮ್ಆರ್ಐ (MRI) ಸ್ಕ್ಯಾನ್ ಮಾಡಲಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವ ಕಂಡುಬಂದಿದೆ ಎಂದು ಇಶಾ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿತ್ತು. ನಂತರ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಸದ್ಗುರು ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ ವಿನಿತ್ ಸೂರಿ, ಸದ್ಗುರುಗಳ ಮೆದುಳು, ದೇಹ ಮತ್ತು ಪ್ರಮುಖ ನಿಯತಾಂಕಗಳು ಸಾಮಾನ್ಯ ಮಟ್ಟಕ್ಕೆ ಸುಧಾರಿಸಿದೆ ಎಂದು ಹೇಳಿದ್ದಾರೆ.