ಸ್ಟ್ಯಾನ್ಫೋರ್ಡ್: ರಾಜಕೀಯಕ್ಕೆ ಸೇರಿದಾಗ ನಾನು ಲೋಕಸಭೆಯಿಂದ ಅನರ್ಹಗೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈ ಅನರ್ಹತೆ ನನಗೆ ಜನರ ಸೇವೆ ಮಾಡಲು ದೊಡ್ಡ ಅವಕಾಶ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರವಾಗಿ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
2000ನೇ ಇಸವಿಯಲ್ಲಿ ನಾನು ರಾಜಕೀಯಕ್ಕೆ ಬಂದಾಗ ಈ ರೀತಿ ಆಗಬಹುದೆಂದು ಊಹಿಸಿರಲಿಲ್ಲ. ನಾನು ರಾಜಕೀಯ ಪ್ರವೇಶಿಸಿದಾಗ ಅಂದುಕೊಂಡಿದ್ದಕ್ಕೆ ವಿರುದ್ಧವಾಗಿ ಈಗ ನಡೆಯುತ್ತಿದೆ. ನಾನು ಲೋಕಸಭೆಯಿಂದ ಅನರ್ಹಗೊಳ್ಳಬಹುದು ಎಂದು ಯಾವತ್ತೂ ಊಹಿಸಿರಲಿಲ್ಲ. ಆದರೆ ಅದು ನಿಜವಾಗಿ ನನಗೆ ಒಂದು ದೊಡ್ಡ ಅವಕಾಶವನ್ನು ನೀಡಿದೆ ಎಂದು ಭಾವಿಸುತ್ತೇನೆ. ಬಹುಶಃ ನನಗೆ ಸಿಗುವ ಅವಕಾಶಕ್ಕಿಂತ ದೊಡ್ಡದಾಗಿದೆ. ಅದು ರಾಜಕೀಯ ಕೆಲಸ ಮಾಡುವ ವಿಧಾನವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆರು ತಿಂಗಳ ಹಿಂದೆ ನಿಜವಾದ ನಾಟಕ ಆರಂಭವಾಯಿತು ಎಂದು ನಾನು ಭಾವಿಸುತ್ತೇನೆ. ಇಡೀ ಪ್ರತಿಪಕ್ಷಗಳೇ ಪ್ರಭುತ್ವದ ವಿರುದ್ಧ ಹೋರಾಡಲು ಹೆಣಗಾಡುತ್ತಿವೆ. ಭಾರಿ ಆರ್ಥಿಕ ಪ್ರಾಬಲ್ಯ. ಸಂವಿಧಾನಿಕ ಸಂಸ್ಥೆಗಳ ವಶ. ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ಹೋರಾಟ ಮಾಡಲು ನಾವು ಹೆಣಗಾಡುತ್ತಿದ್ದೇವೆ.” ಈ ಸಮಯದಲ್ಲಿ ನಾನು ‘ಭಾರತ್ ಜೋಡೋ ಯಾತ್ರೆ’ಗೆ ಹೋಗಲು ನಿರ್ಧರಿಸಿದೆ ಎಂದು ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ್ದಾರೆ.