ಮುಂಬೈ: ಮಲಗುವುದು ಮನುಷ್ಯನ ಮೂಲಭೂತ ಹಕ್ಕೇ… ? ಈ ಪ್ರಶ್ನೆಗೆ ಬಾಂಬೆ ಹೈಕೋರ್ಟ್… ‘ಹೌದು’ ಎಂದಿದೆ. ಮಲಗುವುದಷ್ಟೇ ಅಲ್ಲ, ಕಣ್ಣು ಮಿಟುಕಿಸುವುದು ಸಹ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ನಿದ್ರಿಸುವುದು ಐಶಾರಾಮಿತನವಲ್ಲ ಅದು ಮನುಷ್ಯನ ಅವಶ್ಯಕತೆ. ಹಾಗಾಗಿ, ಯಾವುದೇ ವ್ಯಕ್ತಿಯ ನಿದ್ರೆಗೆ ಭಂಗ ತರುವುದು ಆತನ ಮೂಲಭೂತ ಹಕ್ಕನ್ನು ಭಂಗಗೊಳಿಸಿದಂತೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಎಲ್ಲಾ ಬಿಟ್ಟು ಹೀಗೆ ನಿದ್ರೆಯ ಬಗ್ಗೆ ನ್ಯಾಯಪೀಠ ಹೀಗೇಕೆ ಹೇಳಿತು ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಅದಕ್ಕೆ ಉತ್ತರವೂ ಇಲ್ಲಿದೆ. ಜಾರಿ ನಿರ್ದೇಶನಾಲಯ, ಇತ್ತೀಚೆಗೆ 64 ವರ್ಷದ ವ್ಯಕ್ತಿಯೊಬ್ಬರನ್ನು ಪ್ರಕರಣವೊಂದರ ವಿಚಾರಣೆಗೊಳಪಡಿಸಿತ್ತು. ರಾತ್ರಿ 10:30ರ ಸುಮಾರಿಗೆ ಶುರುವಾದ ವಿಚಾರಣೆ ಮುಂಜಾನೆ 3:30ರವರೆಗೆ ನಡೆದಿತ್ತು. ವಿಚಾರಣೆಯ ನಂತರ ಆ ವೃದ್ಧರನ್ನು ಬಂಧಿಸಲಾಗಿತ್ತು.
ಸದ್ಯಕ್ಕೆ ಅದೇ ವ್ಯಕ್ತಿಯೇ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮಗೆ ನಿದ್ರಿಸಲು ಅವಕಾಶ ಕೊಡದೇ ನನ್ನನ್ನು ತೊಂದರೆಗೀಡು ಮಾಡಿದರೆಂದು ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ನಿದ್ರಿಸುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಅದಕ್ಕೆ ಭಂಗ ತಂದರೆ ಅದು ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಅಲ್ಲದೆ, ಆತನ ಪ್ರಜ್ಞಾವಸ್ಥೆಗೂ ಧಕ್ಕೆ ತರಬಲ್ಲದು ಎಂದು ನ್ಯಾಯಾಲಯ ತಿಳಿಸಿದೆ. ಅಷ್ಟೇ ಅಲ್ಲದೆ, ತನ್ನೀ ನಿಲುವು ಕೇವಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿದ ಮಾತುಗಳಲ್ಲ, ಬದಲಿಗೆ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕೃತವಾದ ಮಾನವ ಹಕ್ಕುಗಳಲ್ಲಿಯೂ ಉಲ್ಲೇಖವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.