ದೊಡ್ಡಬಳ್ಳಾಪುರ: ವರ್ಗಾವಣೆ ಮಾಡದ ಹಿನ್ನೆಲೆಯಲ್ಲಿ ಮನನೊಂದು ಸರ್ಕಾರಿ ಶಾಲೆ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ. ತುರುವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಟಿ.ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಚಿತ್ರದುರ್ಗ ತಾಲೂಕಿ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಕೆ.ಯು. ವಿರೂಪಾಕ್ಷ ಹಾಗೂ ಹೊಳಲ್ಕೆರೆ ತಾಲೂಕು ನಲ್ಲಿಕಟ್ಟೆ ಗ್ರಾಮದ ಎನ್.ಟಿ.ಜ್ಯೋತಿ ಅವರನ್ನು 13 ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.
ಕಳೆದ 12 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಬನವತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದ ಜ್ಯೋತಿ ಅವರು 9 ತಿಂಗಳ ಹಿಂದೆ ತುರುವನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಂದಿನಿಂದ ಸೋಮೇಶ್ವರ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಎಲ್ಲಿಯೂ ಖಾಲಿ ಜಾಗ ಇರದ ಕಾರಣ ವರ್ಗಾವಣೆ ಆಗಿರಲಿಲ್ಲ. ಈ ವಿಚಾರದಲ್ಲಿ ಮನನೊಂದಿದ್ದರು. ಜು.14ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಯಲಹಂಕದ ದೊಡ್ಡಬೆಟ್ಟಹಳ್ಳಿಗೆ ಹೋಗಿದ್ದಾಗ ಮನೆಯಲ್ಲಿ ನನ್ನ ಪತ್ನಿ ಒಬ್ಬರೇ ಇದ್ದರು.
ಶುಕ್ರವಾರ ರಾತ್ರಿ 8.30 ಗಂಟೆಯಲ್ಲಿ ಮನೆಗೆ ವಾಪಸ್ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬೇಜಾರಿನಲ್ಲಿ ಮಲಗಿರಬಹುದು ಎಂದು ತಿಳಿದು ನಾನು ಮನೆಯ ಮೇಲಿನ ಕೊಠಡಿಯಲ್ಲಿ ಮಲಗಿದ್ದೆ. ಇಂದು (ಶನಿವಾರ ) ಬೆಳಿಗ್ಗೆ ಸುಮಾರು 6 ಗಂಟೆಗೆ ಕೆಳಗಿಳಿದು ಬಂದು ಬಾಗಿಲು ತಟ್ಟಿದಾಗ ತೆಗೆಯಲಿಲ್ಲ. ಹೊರಗಿನಿಂದ ಬೆಡ್ ರೂಮಿನ ಕಿಟಕಿ ತೆಗೆದು ನೋಡಿದಾಗ ಸೀರೆಯಿಂದ ನೇಣು ಹಾಕಿಕೊಂಡಿದ್ದರು ಎಂದು ಪತಿ ಕೆ.ಯು.ವಿರೂಪಾಕ್ಷ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.