ಮೈಸೂರು:- ಮುಡಾ ದೂರುದಾರ ದೂರುದಾರ ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯ ವಿರುದ್ಧ ಇಡಿಗೂ ದೂರು ನೀಡಿದ್ದಾರೆ. ಆ ಮೂಲಕ ಸಿಎಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಇಡಿಗೆ 16 ಪುಟಗಳ ಇ-ಮೇಲ್ ಹಾಗೂ ಪತ್ರ ಬರೆಯುವ ಮೂಲಕ ಜಾರಿ ನಿರ್ದೇಶನಾಲಯದ ಬೆಂಗಳೂರು ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಮನಿ ಲ್ಯಾಂಡರಿಂಗ್ ಆಯಕ್ಟ್ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಪತ್ನಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿದ್ದಾರೆ ಅನ್ನೋ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಹಗರಣ ಸಂಬಂಧ ನಿನ್ನೆಯಷ್ಟೇ ಸಿಎಂ ಹಾಗೂ ಪತ್ನಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇಂದು ಹಾಗೂ ನಾಳೆ ರಜೆ ಇರೋದ್ರಿಂದ ಸೋಮವಾರದಿಂದ ತನಿಖೆ ಆರಂಭ ಆಗೋ ಸಾಧ್ಯತೆ ಇದೆ.
ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಎಸ್ಪಿ ಉದೇಶ್, ತನಿಖೆಗಾಗಿ ನಾಲ್ಕು ತಂಡ ರಚನೆ ಮಾಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಮಾಲತೀಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಹಾಗೂ ಇನ್ಸ್ಪೆಕ್ಟರ್ ಒಳಗೊಂಡ ನಾಲ್ಕು ತನಿಖಾ ತಂಡಗಳ ರಚನೆ ಮಾಡಲಾಗಿದೆ.