ಮಂಡ್ಯ : ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ರೈತರನ್ನು ಮನವೊಲಿಸುವ ಮೂಲಕ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಮನ್ ಮುಲ್ ನಿರ್ದೇಶಕಿ ರೂಪ ಮಂಗಳವಾರ ಹೇಳಿದರು.
ಮದ್ದೂರು ಪಟ್ಟಣದ ಹಾಲು ಒಕ್ಕೂಟದ ಉಪ ಕಛೇರಿಯಲ್ಲಿ ರಾಷ್ಟೀಯ ಡೈರಿ ಅಭಿವೃದ್ಧಿ ಯೋಜನೆಯಡಿ ತಾಲ್ಲೂಕಿನ 32 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಂಪ್ಯೂಟರ್ ವಿತರಿಸಿ ಮಾತನಾಡಿದರು.
ಜಿಲ್ಲಾ ಹಾಲು ಒಕ್ಕೂಟ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇತರೇ ಡೇರಿಗಳೊಂದಿಗೆ ಪೈಪೋಟಿ ನಡೆಸಬೇಕಾದರೆ ಗ್ರಾಹಕರಿಗೆ ಗುಣಮಟ್ಟದ ಹಾಲು ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸುವಂತೆ ರೈತರ ಮನವೊಲಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿದಾಗ ಮಾತ್ರ ಒಕ್ಕೂಟ ಆರ್ಥಿಕವಾಗಿ ಸಧೃಡವಾಗುವ ಜೊತೆಗೆ ಹಾಲಿಗೆ ಸೂಕ್ತ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ರೈತರ ಜೀವನ ಮಟ್ಟ ಸುಧಾರಣೆಗೆ ಹೈನುಗಾರಿಕೆ ವರದಾನವಾಗಿದೆ. ಕೃಷಿ ಚಟುವಟಿಕೆಗಳ ಜೊತೆಗೆ ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿ ಅಳವಡಿಸಿಕೊಂಡಿರುವುದರಿಂದ ಕುಟುಂಬ ನಿರ್ವಹಣೆಗೆ ಆರ್ಥಿಕ ಸಹಾಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ರೈತರ ಪೈಕಿ ಶೇ.70ರಷ್ಟು ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾಗಬಹುದು ಆದರೆ, ಹೈನುಗಾರಿಕೆಯಿಂದ ಎಂದು ನಷ್ಟವಾಗಲು ಸಾಧ್ಯವಿಲ್ಲ. ಹೀಗಾಗಿ ಹೈನುಗಾರಿಕೆಯನ್ನು ಉಪ ಕಸುಬಾಗಿ ತೆಗೆದುಕೊಂಡು ಆರ್ಥಿಕವಾಗಿ ಸಧೃಡರಾಗಬೇಕು ಎಂದು ಎಸ್.ಪಿ.ಸ್ವಾಮಿ ಸಲಹೆ ನೀಡಿದರು.
ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣಯ್ಯ, ವಿಸ್ತರಣಾಧಿಕಾರಿಗಳಾದ ರುಮಾನ, ದಿವ್ಯ, ಶಶಿಕುಮಾರ್, ಸೌಮ್ಯ, ಅಫಶಾ, ಬಸವರಾಜು ತಾಲ್ಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.