ದಿಯಾ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟ ದೀಕ್ಷಿತ್ ಶೆಟ್ಟಿ ಸದ್ಯ ಮಲಯಾಳಂ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಜೊತೆ ತೆರೆಹಂಚಿಕೊಂಡ ಬಳಿಕ ಮಾಲಿವುಡ್ನಲ್ಲೂ ದೀಕ್ಷಿತ್ಗೆ ಬಿಗ್ ಚಾನ್ಸ್ ಸಿಕ್ಕಿದೆ. ಈಗಾಗ್ಲೆ ಸಿನಿಮಾದ ಶೂಟಿಂಗ್ಗೆ ಭಾಗಿಯಾಗಿರೋ ದೀಕ್ಷಿತ್ ತಮಗೆ ಸಿಕ್ಕಿರುವ ಅವಕಾಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರೇಮಂ, ಚಾರ್ಲಿ, ಬೆಂಗಳೂರು ಡೇಸ್ ಸೇರಿದಂತೆ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಸರಳ ಕಥೆಯನ್ನು ಎಷ್ಟು ಅದ್ಭುತವಾಗಿ ತೋರಿಸುತ್ತಾರೆ ಎಂದು ಅಚ್ಚರಿಪಟ್ಟಿದೆ. ಇಂದು ನಾನೇ ಮಲಯಾಳಂ ಸಿನಿಮಾಗೆ ಸಾಕ್ಷಿಯಾಗುತ್ತಿದ್ದೇನೆ. ಖಂಡಿತಾ ನಿಮ್ಮೆಲ್ಲರ ಪ್ರೀತಿ ಇಲ್ಲದೇ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಬಳಿಕ ಅಧಿಕೃತವಾಗಿ ಮಾಲಿವುಡ್ನ ಭಾಗವಾಗಿದ್ದೇನೆ ಎಂದು ಹೇಳಬಹುದು ಎಂದು ದೀಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಹೇಳಿದ್ದಾರೆ, ಚಾನ್ಸ್ ನೀಡಿದ ಮಲಯಾಳಂ ‘ಒಪ್ಪೀಸ್’ ಚಿತ್ರದ ನಿರ್ದೇಶಕನಿಗೆ ದೀಕ್ಷಿತ್ ಶೆಟ್ಟಿ ಧನ್ಯವಾದ ಹೇಳಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಕೇರಳದಲ್ಲಿ ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ಒಪ್ಪೀಸ್’ ಸಿನಿಮಾದ ಮುಹೂರ್ತ ಸಮಾರಂಭ ಸರಳವಾಗಿ ನಡೆದಿದೆ. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೆ ಕಥೆಯ ತಿರುಳು. ಇದೀಗ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸೌಜನ್ ಜೋಸೆಫ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ.