ಡಿಕೆಶಿ ನೆತ್ತಿ ಮೇಲೆ ತೂಗಾಡುತ್ತಿದ್ದ ಸಿಬಿಐ ಕತ್ತಿ ಕಳಚಿಬಿದ್ದಿದೆ. ಕಾಂಗ್ರೆಸ್ ಕ್ಯಾಪ್ಟನ್ ವಿರುದ್ಧ ನಡೀತಿದ್ದ ಕೇಂದ್ರ ತನಿಖಾ ಸಂಸ್ಥೆಯ ತನಿಖೆಗೆ ಬ್ರೇಕ್ ಬಿದ್ದಿದೆ. ಇದೀಗ ಸಿಬಿಐ ತನಿಖೆ ವಾಪಸ್ ಪಡೀತಿದ್ದಂತೆ ಕಾಂಗ್ರೆಸ್ ಸರ್ಕಾರ ರಾಜ್ಯ ತನಿಖಾ ಸಂಸ್ಥೆಗೆ ಕನಕಾಧಿಪತಿಯ ಕೇಸ್ನ ನೀಡಲು ಮುಂದಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಸಿಬಿಐ ಎಂಬ ದೊಣ್ಣೆಯಿಂದ ಕನಕಪುರ ಕಲಿ ಪಾರಾಗಿದ್ದಾರೆ. ಸಿದ್ದರಾಮಯ್ಯ ಕ್ಯಾಬಿನೆಟ್ ತಮ್ಮ ಸರ್ಕಾರದ ಡಿಸಿಎಂಗೆ ಬಿಗ್ ರಿಲೀಫ್ ಕೊಟ್ಟಿದೆ. ಸಿಬಿಐ ಉರುಳಿನಿಂದ ಬಚಾವ್ ಆಗಿರೋ ಡಿ.ಕೆ. ಶಿವಕುಮಾರ್ಗೆ ಮತ್ತಷ್ಟ ನಿರಾಳತೆ ತರಲು ಸರ್ಕಾರ ಮುಂದಾದಂತೆ ಕಾಣ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧದ ಐಟಿ ಕೇಸ್ನ ರಾಜ್ಯ ತನಿಖಾ ಸಂಸ್ಥೆಗೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಕೆಶಿಯನ್ನ ಮತ್ತಷ್ಟು ಸೇಫ್ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಳ್ಳಲು ಸಜ್ಜಾಗಿದೆ. ಸಚಿವ ಸಂಪುಟದ ಆದೇಶವನ್ನು ಸಿಬಿಐ ಪ್ರಶ್ನೆ ಮಾಡುವ ಮೊದಲೇ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಡಿಸಿಎಂ ಡಿಕೆಶಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನ ಲೋಕಾಯುಕ್ತಕ್ಕೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ. CBI ನಿಂದ ವಾಪಸ್ ಪಡೆದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.