ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗುರುವಾರ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಇದು ನನ್ನ ಜೀವನದಲ್ಲಿ ಬಹಳ ನೆನಪಿನಲ್ಲಿ ಉಳಿಯಲಿರುವ ದಿನ.
ಕಾರಣ ಇಂದು ನಾನು ಪವಿತ್ರ ಆಟೋ ಚಾಲನೆ ಮಾಡಿದ ದಿನ. ನಿಮ್ಮ ಕುಟುಂಬದ ಸದಸ್ಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಇದಕ್ಕಾಗಿ ನನಗೆ ಹೆಮ್ಮೆ ಇದೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ನೀವು ದೇಶ ಹಾಗೂ ಜನ ಸೇವಕರು. ಮಧ್ಯಮವರ್ಗ ಹಾಗೂ ಜನ ಸಾಮಾನ್ಯರ ಸಾರಥಿಗಳು.
ಇಡೀ ಪ್ರಪಂಚದಲ್ಲಿ ಈ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ. ಜನ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡಿಕೊಂಡು ಬಂದಿದ್ದೀರಿ. ಒಬ್ಬ ವ್ಯಕ್ತಿ ಸಾಧನೆಗೆ ನೀವು ಸಂಪರ್ಕದ ವ್ಯವಸ್ಥೆಯಾಗಿದ್ದೀರಿ. ಜನರ ನಂಬಿಕೆ ಗಳಿಸಿದ್ದೀರಿ. ನಿಮಗೆ ಕೋಟಿ ಧನ್ಯವಾದಗಳು ಎಂದರು. ಬೆಲೆ ಏರಿಕೆಯಿಂದ ಪರದಾಡುತ್ತಿರುವ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಮುಂದಿನ ಜೂನ್ ನಂತರ ಚಾಲಕರು ಯಾರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ.
ಅದೇ ರೀತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ ನೀಡುತ್ತೇವೆ. ಇನ್ನು ಬಡ ಕುಟುಂಬಗಳ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಉಚಿತ ಅಕ್ಕಿ ನೀಡಲಾಗುವುದು. ಇನ್ನು ನಿರುದ್ಯೋಗಿ ಯುವಕರಿಗೆ ನೆರವು ನೀಡಲು ಪದವೀಧರ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಮಾಡಿರುವವರಿಗೆ ಪ್ರತಿ ತಿಂಗಳು 1500 ರೂ.ಗಳನ್ನು ನೀಡಲಾಗುವುದು ಎಂಬ ಮಾಹಿತಿ ನೀಡಿದರು.