ಬೆಂಗಳೂರು: ಬಿಜೆಪಿಯವರ ರೇಟ್ ಕಾರ್ಡ್ ಅನ್ನು ನಾವು ಕೊಟ್ಟಿಲ್ಲ. ಬಿಜೆಪಿಯವರೇ (BJP) ಕೊಟ್ಟಿದ್ದನ್ನು ನಾವು ಹಾಕಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ರೇಟ್ ಕಾರ್ಡ್ ಜಾಹೀರಾತು ನೀಡಿದ್ದಕ್ಕೆ ಚುನಾವಣಾ ಆಯೋಗ (Election Commission) ನೀಡಿದ ನೋಟಿಸ್ಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್, ಗೂಳಿಹಟ್ಟಿ ಶೇಖರ್, ಹೆಚ್ ವಿಶ್ವನಾಥ್, ಮಾಧ್ಯಮದವರು ಕೊಟ್ಟಿದ್ದಾರೆ. ಅದನ್ನು ನಾವು ಪ್ರಕಟಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರೇಟ್ ಎಷ್ಟು, ಮಂತ್ರಿ ಸ್ಥಾನಕ್ಕೆ ಎಷ್ಟು, ಮಠಗಳ ಸ್ವಾಮೀಜಿಗಳಿಂದ ಎಷ್ಟು ಅಂತ ಬಿಜೆಪಿ ನಾಯಕರೇ ಹೇಳಿದ್ದನ್ನು ನಾವು ಪ್ರಕಟ ಮಾಡಿದ್ದೇವೆ ಎಂದು ತಿಳಿಸಿದರು. ಶನಿವಾರ ಕಾಂಗ್ರೆಸ್ ಬಿಜೆಪಿ ಭ್ರಷ್ಟಾಚಾರದ ರೇಟ್ ಕಾರ್ಡ್ ಬಳಸಿ ಜಾಹೀರಾತು ನೀಡಿತ್ತು. ಈ ಜಾಹೀರಾತನ್ನು ಪ್ರಶ್ನಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.