ಬೆಂಗಳೂರು:- DCM ಡಿಕೆ ಶಿವಕುಮಾರ್ ಅವರು, ರಾತ್ರೋ ರಾತ್ರಿ ಫೀಲ್ಡಿಗಿಳಿದು ರಸ್ತೆ ಗುಂಡಿ ಪರಿಶೀಲಿಸಿದ್ದು, 14,307 ರಸ್ತೆಗುಂಡಿಗಳಿಗೆ ಮುಕ್ತಿ ಸಿಕ್ಕಿದೆ.
ಸದಾಶಿವನಗರದ ತಮ್ಮ ನಿವಾಸದಿಂದ ಡಿಸಿಎಂ ನಗರ ಪ್ರದಕ್ಷಿಣೆಗೆ ಮಾಡಿ, ಹಲವೆಡೆ ರಸ್ತೆ ಪರಿಶೀಲನೆ ನಡೆಸಿದರು.
ಡಿಸಿಎಂಗೆ ಶಾಸಕ ಹ್ಯಾರೀಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಾಥ್ ನೀಡಿದರು.
ಸಿಲಿಕಾನ್ ಸಿಟಿ, ಟೆಕ್ ಹಬ್ ಎಂದೆಲ್ಲ ಖ್ಯಾತಿ ಗಳಿಸಿದ ಬೆಂಗಳೂರು ಗುಂಡಿಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಹೀಗಾಗಿ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಗಡುವು ನೀಡಿದರು. ಗಡುವು ಮುಕ್ತಾಯಗೊಂಡ ಹಿನ್ನೆಲೆ ಖುದ್ದು ರಸ್ತೆಗಿಳಿದು ಪರಿಶೀಲನೆ ನಡೆಸಿದರು.
ಸುಮಾರು ರಾತ್ರಿ 11:30ರ ವೇಳೆಗೆ ಪ್ರದಕ್ಷಿಣೆ ಆರಂಭಿಸಿದ ಡಿಸಿಎಂ ಮಧ್ಯರಾತ್ರಿ 2 ಗಂಟೆವರೆಗೂ ಪ್ರದಕ್ಷಿಣೆ ನಡೆಸಿದರು. ಖುದ್ದು ರಸ್ತೆಗಿಳಿದ ಡಿಸಿಎಂ, ಜಯಮಹಲ್ ರಸ್ತೆಯ ಪ್ಯಾಚ್ ವರ್ಕ್ ವೀಕ್ಷಣೆ ವೇಳೆ ಆರೆಯಿಂದ ನೆಲಕ್ಕೆ ಗುದ್ದಿ ಪರಿಶೀಲನೆ ನಡೆಸಿದರು. ನಂತರ ಟ್ರಿನಿಟಿ ಜಂಕ್ಷನ್ನಲ್ಲಿ ಡಾಂಬರೀಕರಣಕ್ಕೂ ಮುನ್ನ ಮಾಡುವ ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲಿಸಿದರು. ರಸ್ತೆಯ ಹದಗೆಟ್ಟಿರುವ ಭಾಗವನ್ನು ಮಿಲ್ಲಿಂಗ್ ಮಾಡಿ ಡಾಂಬರೀಕರಣ ಮಾಡುವಂತೆ ಸೂಚಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳ ಬಗ್ಗೆ ಮಾಹಿತಿ ಬಂದಿತ್ತು, ಹಾಗಾಗಿ ಗುಂಡಿ ಮುಚ್ಚೋದಕ್ಕೆ ಎಲ್ಲರಿಗೂ ಹೇಳಿದ್ದೆ. ಯಾವುದೇ ಸಮಾಧಾನಕರವಾದ ಕೆಲಸ ನನ್ನ ಗಮನಕ್ಕೆ ಬಂದಿರಲಿಲ್ಲ. 15 ದಿನದ ಹಿಂದೆ ಮೀಟಿಂಗ್ ಮಾಡಿ ಡೆಡ್ ಲೈನ್ ನೀಡಿದ್ದೆ. ಆಯುಕ್ತರು, ಜಂಟಿ ಆಯುಕ್ತರು ಎಲ್ಲರಿಗೂ ಮಾಹಿತಿ ನೀಡಿದ್ದೆ. ಕೆಲಸದ ವಿಡಿಯೋ ಮಾಡಿ ಪೋಸ್ಟ್ ಮಾಡೋದಕ್ಕೆ ಹೇಳಿದ್ದೆ. ಇದುವರೆಗೆ 14,307 ಗುಂಡಿಗಳನ್ನ ಅಧಿಕಾರಿಗಳು ಮುಚ್ಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಎಲ್ಲಾ ವಿಡಿಯೋಗಳು ನನ್ನ ಮೊಬೈಲ್ ಫೋನ್ಗೆ ಬಂದಿವೆ. ಸದ್ಯದ ಮಟ್ಟಿಗೆ ಎಲ್ಲವೂ ಸಮಾಧಾನಕರವಾಗಿ ಕಾಣ್ತಾ ಇದೆ. ಆದರೂ ಒಮ್ಮೆ ನಾನು ಪರಿಶೀಲನೆ ಮಾಡಿ ನೋಡಬೇಕು. ಮಳೆ ಕಾರಣದಿಂದ ಕ್ವಾಲಿಟಿ ಮೆಂಟೇನ್ ಮಾಡೋದು ಸ್ವಲ್ಪ ಕಷ್ಟ. ಸರಿಯಾಗಿ ಕೆಲಸ ಆಗದೇ ಇದ್ದರೆ ಖಂಡಿತಾ ತಲೆದಂಡ ಎದುರಿಸಬೇಕಾಗುತ್ತೆ. ನಾಗರೀಕರಿಗೆ ಒಳ್ಳೆದಾಗ್ಬೇಕು, ಗುಂಡಿಯಿಂದ ಯಾರ ಪ್ರಾಣವೂ ಹೋಗಬಾರದು, ನನಗೆ ಪೇಪರ್ ಮತ್ತು ಅಧಿಕಾರಿಗಳ ಮಾತಿನ ಮೇಲೆ ನಂಬಿಕೆ ಇಲ್ಲ ಎಂದರು.