ಬೆಂಗಳೂರು: ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರರು ಭಾಗವಹಿಸಿದ್ದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ಮೆಟ್ರೋ ರೈಲು ನಿಗಮದ ಅಧಿಕಾರಿಗಳ ಸಭೆ ಮಾಡಿ, ಕಾರ್ಯವೈಖರಿ ಪರಿಶೀಲನೆ ಮಾಡಿದ್ದೇನೆ. ಮೆಟ್ರೋ ಕಾರ್ಯನಿರ್ವಹಣೆ, ಮುಂದಿನ ಕಾರ್ಯಯೋಜನೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಮೆಟ್ರೋ ರೈಲು ನಂತರ ನಮ್ಮದು ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಆಗಿದ್ದು, ವಿಶ್ವದರ್ಜೆ ಮಟ್ಟದ ಸೇವೆ ನೀಡುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಮ್ಮ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 48 ಕೋಟಿ ರೂ ಆದಾಯದಲ್ಲಿ 42 ಕೋಟಿ ರೂ.ಯಷ್ಟು ಹಣ ಕಾರ್ಯನಿರ್ವಹಣೆಗೆ ಖರ್ಚಾಗುತ್ತಿದೆ. ಬಂಡವಾಳ ಹೂಡಿಕೆ ಹೊರತಾಗಿ ಕೇವಲ 6 ಕೋಟಿ ರೂ ಲಾಭದಲ್ಲಿದೆ ಎಂದು ಹೇಳಿದ್ದಾರೆ. ಪ್ರಯಾಣಿಕರ ಹೊರತಾಗಿ ಇತರೆ ಮೂಲಗಳಿಂದ ಆದಾಯ ಗಳಿಸುವ ಕುರಿತು ನಾನು ಕೆಲವು ಸಲಹೆ ನೀಡಿದ್ದೇನೆ.
ಜಾಹೀರಾತು ಬಗ್ಗೆ ಇರುವ ನಿರ್ಬಂಧ ಸರಿಪಡಿಸುತ್ತೇವೆ. ಇದರ ಜತೆಗೆ ಅವರಿಗೆ ಸಬ್ಸಿಡಿಯಲ್ಲಿ ಸಿಗುತ್ತಿರುವ ವಿದ್ಯುತ್ ಅನ್ನು ಗ್ರೂಪ್ ಕ್ಯಾಪಿಟಿವ್ ಮೂಲಕ ಮತ್ತಷ್ಟು ಕಡಿಮೆ ದರಕ್ಕೆ ಪಡೆಯುವ ಸಲಹೆ ನೀಡಿದ್ದೇನೆ ಎಂದು ಹೇಳಿದ್ದಾರೆ.