ಮಂಡ್ಯ: 2023ರ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದ ವಿಶ್ವಾಸದಲ್ಲಿದೆ. ಈ ನಡುವೆಯೇ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿಕೆಶಿ (DK Shivakumar) ಅಮಾವಾಸ್ಯೆ ಪೂಜೆ ನೆಪದಲ್ಲಿ ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಸತಾಯಗತಾಯ ಚುನಾವಣೆ ಗೆಲ್ಲಲೇಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿವೆ. ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ.ಶಿವಕುಮಾರ್, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ಸುತ್ತುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ಜೊತೆಗೆ ಸಿಎಂ ಆಗಲೇಬೇಕೆಂದು ಪಣತೊಟ್ಟಿರುವ ಡಿಕೆಶಿ, ದೇವರ ಮೊರೆ ಹೋಗಿದ್ದಾರೆ. ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿದ್ದು, ಶ್ರೀಕಾಲಭೈರವೇಶ್ವರನ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಆದಿಚುಂಚನಗಿರಿ ಶ್ರೀಕಾಲಭೈರವೇಶ್ವರನಿಗೆ ಅಮಾವಾಸ್ಯೆಯಂದು ಪೂಜೆ ಸಲ್ಲಿಸೋದು ವಿಶೇಷ. ಅದರಲ್ಲೂ ನಿರಂತರ ಮೂರು ಅಮಾವಾಸ್ಯೆ ಪೂಜೆ ಸಲ್ಲಿಸಿ, ಸಂಕಲ್ಪ ಮಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ನಿರಂತರ ಮೂರು ಅಮಾವಾಸ್ಯೆಗಳಂದು ವಿಶೇಷ ಪೂಜೆ ಸಲ್ಲಿಸಿದ್ರು. ಅದರ ಪೂಜಾ ಫಲವಾಗಿ 2018ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಗದ್ದುಗೆಗೇರಿದ್ರು. ಇದೀಗ ಕುಮಾರಸ್ವಾಮಿ ಅವರ ಹಾದಿಯಲ್ಲೇ ಸಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಮಾವಾಸ್ಯೆಯಂದು ಕಾಲಭೈರವೇಶ್ವರನ ಮೊರೆ ಹೋಗಿದ್ದು ವಿಶೇಷ ಪೂಜೆ ಸಲ್ಲಿಸಿದ್ರು.
ಇಂದು ಡಿ.ಕೆ ಶಿವಕುಮಾರ್, ದಂಪತಿ ಸಹಿತ ಆದಿಚುಂಚನಗಿರಿ (Adichunchangiri) ಶ್ರೀಕ್ಷೇತ್ರಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ರು. ಪೂಜೆ ನಂತರ ನಿರ್ಮಲಾನಂದನಾಥ ಶ್ರೀಗಳು, ಡಿಕೆಶಿಗೆ ಶಾಲು, ಹಾರ ಹಾಕಿ, ಫಲ-ಪುಷ್ಪ ನೀಡಿ ಆಶೀರ್ವದಿಸಿದ್ರು. ಬಳಿಕ ಚುಂಚನಗಿರಿ ಶ್ರೀಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ್ರು. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹೊಸ ವರ್ಷದ ಅಮಾವಾಸ್ಯೆ, ವಿಶೇಷ ಹಬ್ಬ. ಹೀಗಾಗಿ ಶ್ರೀಮಠಕ್ಕೆ ಬಂದಿದ್ದೇನೆ. ಈ ವರ್ಷ ರಾಜ್ಯದಲ್ಲಿ ದೊಡ್ಡ ವ್ಯತ್ಯಾಸ, ಬದಲಾವಣೆ ಆಗ್ತಿದೆ. ನಾಡಿಗೆ ಒಳ್ಳೆಯದಾಗಲಿ, ನಮಗೆ, ನಿಮಗೆಲ್ಲ ಒಳ್ಳೆಯದಾಗ್ಲೀ ಅಂತಾ ನಾನು, ನನ್ನ ಧರ್ಮ ಪತ್ನಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಳ್ತಿದ್ದೇವೆ. ನಮಗೂ, ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ. ದೇವರನ್ನ ಕೇಳೋದು ನಾನು, ವರ ಕೊಡೋದು ದೇವರು. ಸಂಕಲ್ಪ ಮಾಡಿಕೊಳ್ಳುವುದು ನನಗೂ, ಭಗವಂತನಿಗೂ ಬಿಟ್ಟಿದ್ದು. ಮತ್ತೊಂದು ಅಮಾವಾಸ್ಯೆ ಪೂಜೆಗೆ ಬಂದರೆ ಹೇಳ್ತೀನಿ ಬಿಡಿ ಅಂತಂದ್ರು.
ಉರಿಗೌಡ, ನಂಜೇಗೌಡ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ, ನಾವ್ಯಾರೂ ಹೇಡಿಗಳಲ್ಲ. ಉರಿಗೌಡ, ನಂಜೇಗೌಡ, ಸಿ.ಟಿ.ರವಿ, ಅಶೋಕ್, ಅಶ್ವಥ್ ನಾರಾಯಣ್ ಹೊಸದಾಗಿ ಸ್ಟೋರಿ ಬರೆಯುತ್ತಿದ್ದಾರೆ. ಸಿನಿಮಾ ತೆಗೆಯೋಕೆ ಇನ್ಯಾರೋ ಒಬ್ಬ. ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ. ಬಿಜೆಪಿಯವರ ಈ ಕೆಲಸವನ್ನ ಖಂಡಿಸ್ತೀನಿ. ನಮ್ಮ ಸ್ವಾಮಿಗಳು ಇದಕ್ಕೆ ಹೋರಾಟದ ನೇತೃತ್ವ ವಹಿಸಬೇಕು. ಅವನ್ಯಾವನನ್ನೋ ಕರೆದು ಸಿನಿಮಾ ಮಾಡಬೇಡ ಅಂತಾ ಕೂರಿಸಿ ಮಾತಾಡಬಾರದು. ನಮ್ಮ ಒಕ್ಕಲುತನಗಳ ಬಗ್ಗೆ ಬೇಕಿದ್ರೆ ನೂರು ಸಿನಿಮಾ ಮಾಡಲಿ. ನಾವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡೋದಿಲ್ಲ. ಇದರ ವಿರುದ್ಧದ ಹೋರಾಟಕ್ಕೆ ಸ್ವಾಮಿಗಳು ನೇತೃತ್ವ ವಹಿಸಬೇಕು. ಹೋರಾಟದ ಸ್ವರೂಪ, ನಾಯಕತ್ವವನ್ನ ಸ್ವಾಮಿಗಳು ವಹಿಸಬೇಕು. ಇಲ್ಲವಾದರೆ ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನಾನೇ ಹೋರಾಟ ಹಮ್ಮಿಕೊಳ್ತೀನಿ. ಒಕ್ಕಲಿಗರಿಗೆ ಕಳಂಕ ತರಲು ಬಿಜೆಪಿಯವರು ಹೊರಟಿದ್ದಾರೆ. ಉರಿಗೌಡ, ನಂಜೇಗೌಡ ಅನ್ನೋರು ಯಾರೂ ಇಲ್ಲ ಎಂದರು.
ಬಿಜೆಪಿಯವರೇ ಉರಿಗೌಡ, ನಂಜೇಗೌಡ. ಮೊದಲು 40 ಪರ್ಸೆಂಟ್ ಫೈಲ್, ಕೊರೊನಾ ಸಂದರ್ಭದ ಕರಪ್ಷನ್ ಬಗ್ಗೆ ಸಿನಿಮಾ ತೆಗೆಯಲಿ. ಈ ಬಗ್ಗೆ ಎರಡು ಸಿನಿಮಾ ತೆಗೆದರೆ ಸಾಕು. ನಾನು ಸ್ವಾಮಿಗಳ ಜೊತೆ ಹೋರಾಟದ ಬಗ್ಗೆ ಮಾತಾಡಿಲ್ಲ. ನಾನುಂಟು ದೇವರುಂಟು, ನಾನುಂಟು ಸ್ವಾಮಿಗಳುಂಟು. ಉರಿಗೌಡ, ನಂಜೇಗೌಡ ವಿಚಾರವನ್ನ ಪಠ್ಯಕ್ಕೆ ಸೇರಿಸುವ ವಿಚಾರವಾಗಿ, ಯಾವ ಪಠ್ಯನೂ ಇಲ್ಲ. ಅದನ್ನೆಲ್ಲ ಸ್ಕೂಲ್ ಮೇಷ್ಟ್ರು ಹತ್ತಿರ ಕೇಳಿ. ಅಶ್ವಥ್ ನಾರಾಯಣ್, ರವಿಗೆ ಪಾಠ ಹೇಳಿಕೊಟ್ಟ ಮೇಷ್ಟ್ರು ಕೇಳಿ. ಅವರೇನಾದ್ರೂ ಹೇಳಿಕೊಟ್ಟಿದ್ರಾ ಅಂತಾ ಪ್ರಶ್ನಿಸಿದ್ರು.
ಒಟ್ಟಾರೆ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಅಮಾವಾಸ್ಯೆ ಪೂಜೆ ನೆಪದಲ್ಲಿ ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಒಕ್ಕಲಿಗರ ಮತ ಭೇಟೆಗೆ ಇಳಿದಿದ್ದ ಬಿಜೆಪಿಯವರಿಗೆ ಸ್ವಾಮೀಜಿಯವರ ಮೂಲಕವೇ ಕನಕಪುರ ಬಂಡೆ ಠಕ್ಕರ್ ಕೊಡಲು ಮುಂದಾಗಿರೋದಂತೂ ಸುಳ್ಳಲ್ಲ.