ಬೆಂಗಳೂರು ;- ವಿಧಾನಸಭೆಯಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಂಡಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾವು ಹಾಗೂ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆಗಲೂ ನಾವು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೆವು. ಆಗಲೂ ಡ್ಯಾನಿಶ್ ಅಲಿ ಸಮೇತ ಬಹುತೇಕ ಇದೇ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದರು. ಆಗ ನಾವು ಡ್ಯಾನಿಶ್ ಅಲಿಯನ್ನು ಪುಡಿಪುಕ್ಕ ಎಂದು ಕರೆಯಲು ಸಾಧ್ಯವೇ? ಈ ಬಾರಿ ಇವರೆಲ್ಲ ನಾಯಕರು ದೇಶವನ್ನು ಉಳಿಸಲು, ಭಾರತದ ಭವಿಷ್ಯ ಉಳಿಸಲು ಅವರದೇ ಆದ ಸಿದ್ಧಾಂತ ಇಟ್ಟುಕೊಂಡು ಆಗಮಿಸಿದ್ದಾರೆ. ರಾಜಕಾರಣದಲ್ಲಿ ಅವರಿಗೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅನಂತಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಇತ್ತು. ಆಗಲೂ ಶಿಷ್ಟಾಚಾರ ಪಾಲನೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರು ಕೇಳಿದಾಗಲೂ ಶಿಷ್ಟಾಚಾರ ಪಾಲನೆ ಮಾಡಿದ್ದೇವೆ. ಬಿಜೆಪಿಯವರು ಕೇಳಿದಾಗಲೂ ನಾವು ಶಿಷ್ಟಾಚಾರ ಪಾಲಿಸಿದ್ದೇವೆ. ಆಗ ಶಿಷ್ಟಾಚಾರ ಪಾಲಿಸಿದ್ದ ಅಧಿಕಾರಿಗಳೇ ಈಗಲೂ ಇದ್ದಾರೆ. ಬೇಕಿದ್ದರೆ ಆಗ ಯಾರಿಗೆಲ್ಲಾ ಶಿಷ್ಟಾಚಾರ ಪಾಲನೆ ಮಾಡಿದ್ದೆವು ಎಂದು ಪಟ್ಟಿ ನೀಡಬಲ್ಲೆ. ಇದರಲ್ಲಿ ವಿಶೇಷವಿಲ್ಲ ಎಂದಿದ್ದಾರೆ.