ಹಾಸನ: ಗುಜರಾತ್ ಮೂಲದ ಅಮುಲ್ (Amul) ಹಾಲು ಉತ್ಪನ್ನಗಳನ್ನು ವಿರೋಧಿಸಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೋಮವಾರ ನಂದಿನಿ (Nandini) ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಿ ಅದನ್ನು ಹಂಚಿದ್ದರು. ಇದೀಗ ಹಾಲು ಖರೀದಿ ಮಾಡಿ ಹಂಚಿರುವ ಡಿಕೆಶಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಬಿಸಿ ತಟ್ಟಿದೆ.
ಸೋಮವಾರ ಡಿಕೆ ಶಿವಕುಮಾರ್ ಅವರು ಹಾಸನದ (Hassan) ಮಹಾರಾಜ ಪಾರ್ಕ್ ಬಳಿಯ ನಂದಿನಿ ಡೈರಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಿದ್ದರು. ಸುಮಾರು ಎರಡೂವರೆ ಸಾವಿರ ರೂ. ಮೌಲ್ಯದ ಹಾಲಿನ ಉತ್ಪನ್ನಗಳನ್ನು ಡಿಕೆಶಿ ಖರೀದಿ ಮಾಡಿದ್ದರು. ಇದೀಗ ಸಾರ್ವಜನಿಕ ದೂರು ವಿಭಾಗದ ರಾಜ್ಯ ನೋಡಲ್ ಅಧಿಕಾರಿಯಿಂದ ಹಾಸನ ಜಿಲ್ಲಾ ಎಂಸಿಎಂಸಿ ತಂಡಕ್ಕೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ.
ಡಿಕೆಶಿ ನಂದಿನಿ ಹಾಲನ್ನು ಹಂಚುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಈ ವೀಡಿಯೋವನ್ನಾಧರಿಸಿ ಪರಿಶೀಲನೆ ಮಾಡಿ ವರದಿ ನೀಡಲು ನಿರ್ದೇಶಿಸಲಾಗಿದೆ. ಹಾಲು ಖರೀದಿ ಮಾಡಿ ಹಂಚಿರುವಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆಗೆ ಪತ್ರ ಬರೆಯಲಾಗಿದೆ.
ಆದರೆ ವರದಿ ಕೇಳಿರುವ ಪತ್ರದಲ್ಲಿ ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ರಾಜಕೀಯ ಪಕ್ಷ ಎಂದು ಉಲ್ಲೇಖಿಸಿ ಆಯೋಗ ವರದಿ ಕೇಳಿದೆ. ಈ ಬಗ್ಗೆ ಪರಿಶೀಲನೆ ಮಾಡಿ 24 ಗಂಟೆಯೊಳಗೆ ವರದಿ ನೀಡಲು ಸೂಚನೆ ನೀಡಿದೆ.