ಚೆನ್ನೈ: ತಮಿಳುನಾಡಿನಲ್ಲಿರುವ ಆಡಳಿತರೂಢ ಡಿಎಂಕೆ ಇಸ್ರೋ ರಾಕೆಟ್ನಲ್ಲಿ ಚೀನಾ ಧ್ವಜವನ್ನು ಮುದ್ರಿಸಿ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ಇಸ್ರೋದ ಎರಡನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಕಾರ್ಯಕ್ರಮ ಸಂಬಂಧ ತಮಿಳುನಾಡು ಮಂತ್ರಿ ಅನಿತಾ ರಾಧಾಕೃಷ್ಣ ಮುದ್ರಣ ಮಾಧ್ಯಮಗಳಿಗೆ ಜಾಹೀರಾತು ನೀಡಿದ್ದರು. ಈ ಜಾಹೀರಾತಿನಲ್ಲಿ ಮೋದಿ, ಸಿಎಂ ಸ್ಟಾಲಿನ್, ಕನಿಮೋಳಿ ಮತ್ತು ಉದಯನಿಧಿ ಮಾರನ್ ಫೋಟೋದ ಜೊತೆ ರಾಕೆಟ್ ಫೋಟೋವನ್ನು ಮುದ್ರಿಸಲಾಗಿತ್ತು. ಅಷ್ಟೇ ಅಲ್ಲದೇ ಇಸ್ರೋ ರಾಕೆಟ್ನ ತುದಿಯಲ್ಲಿ ಚೀನಾದ ಧ್ವಜವನ್ನು ಮುದ್ರಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ತಿರುನಲ್ವೇಲಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಒಪ್ಪಿಕೊಳ್ಳಲು ಡಿಎಂಕೆಗೆ (DMK) ಆಗುತ್ತಿಲ್ಲ. ಜನರು ಪಾವತಿಸುವ ತೆರಿಗೆಯಿಂದ ಅವರು ಜಾಹೀರಾತುಗಳನ್ನು ನೀಡುತ್ತಾರೆ. ಆದರೆ ಅದರಲ್ಲಿ ಭಾರತದ ಬಾಹ್ಯಾಕಾಶದ ಚಿತ್ರವನ್ನು ಸೇರಿಸುವುದಿಲ್ಲ.
ಭಾರತದ ಬಾಹ್ಯಾಕಾಶ ಯಶಸ್ಸನ್ನು ಪ್ರಪಂಚದ ಮುಂದೆ ತೋರಿಸಲು ಅವರು ಬಯಸುವುದಿಲ್ಲ. ಜಾಹೀರಾತಿನಲ್ಲಿ ಚೀನಾ ಧ್ವಜವನ್ನು ಹಾಕುವ ಮೂಲಕ ನಮ್ಮ ವಿಜ್ಞಾನಿಗಳನ್ನು, ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಮತ್ತು ಜನರ ತೆರಿಗೆ ಹಣವನ್ನು ಅವಮಾನಿಸಲಾಗಿದೆ. ಈ ಕೆಲಸಕ್ಕೆ ಡಿಎಂಕೆಗೆ ಶಿಕ್ಷೆ ನೀಡುವ ಸಮಯ ಈಗ ಬಂದಿದೆ ಎಂದು ವಾಗ್ದಾಳಿ ನಡೆಸಿದರು.