ನವದೆಹಲಿ/ಬೆಂಗಳೂರು: ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದಾರೆ. ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಮತದಾನ ನಡೆಯಲಿದೆ. ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತೆ. ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ. ಮೇ 10ರ ಬುಧವಾರದಂದು 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಮೇ 13ರ ಶನಿವಾರದಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಇನ್ನೂ ಚುನಾವಣಾ ಅಕ್ರಮ ತಡೆಯಲು 2,400 ವಿಚಕ್ಷಣ ತಂಡ ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದ್ದು ಎಲ್ಲಾ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳಲ್ಲಿ ಹದ್ದಿನಕಣ್ಣು ಇಡಲಿದೆ. ಎಲ್ಲಾ ನಗರ, ಜಿಲ್ಲಾ ಕೇಂದ್ರಗಳ ಗೋದಾಮುಗಳ ಮೇಲೆ ನಿಗಾ ಇಡಲಾಗುತ್ತೆ. ಬ್ಯಾಂಕ್ ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾ ಇಡಲಿದೆ. ಹಣದ ವ್ಯವಹಾರ, ಮದ್ಯ ಸಾಗಣೆ ಮೇಲೆ ನಿಗಾ ವಹಿಸಲಾಗುವುದು. ಮತದಾರರಿಗೆ ಗಿಫ್ಟ್ ಹಂಚಿಕೆ, ಹಣ ಹಂಚುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತೆ. ಮತದಾರರಿಗೆ ಆಮಿಷವೊಡ್ಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತೆ ಎಂದು ತಿಳಿಸಿದರು.