ಶಿವಮೊಗ್ಗ : ನನಗೆ ಹಾಗೂ ಕುಮಾರ ಬಂಗಾರಪ್ಪನನ್ನು ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ (Madhu Bangarappa) ಮನವಿ ಮಾಡಿದರು.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಮತ್ತು ವ್ಯಕ್ತಿಯ ಮೇಲೆ ಚುನಾವಣೆ ನಡೆಸುತ್ತೇನೆ. ಆದರೆ, ಸ್ಪರ್ಧೆ ನನ್ನ ಸಹೋದರನ ಮೇಲೆ ಎಂದು ನಾನು ಹೇಳುವುದಿಲ್ಲ. ದಯಮಾಡಿ ಮಾಧ್ಯಮದವರು, ಅಣ್ಣ-ತಮ್ಮ ಸ್ಪರ್ಧೆ ಎಂದು ಬರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಕೆಟ್ಟ ವ್ಯಕ್ತಿ, ಜನಪ್ರತಿನಿಧಿ, ಸರ್ಕಾರದ ಆಸ್ತಿ ಮಾರಾಟ ಮಾಡಲು ಹೊರಟಿರುವ ಒಬ್ಬ ಬಿಜೆಪಿ ಶಾಸಕನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಮುಂದೆ ಯಾವಾಗಲೂ ಮಾಧ್ಯಮಗಳು ನಮ್ಮನ್ನು ಅಣ್ಣ-ತಮ್ಮ ಎಂದು ಕರೆಯಬೇಡಿ ಎಂದರು
ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಜನರ ವಿಶ್ವಾಸ ಗಳಿಸುವುದೇ ನನ್ನ ಸ್ಟ್ಯಾಟರ್ಜಿ ಆಗಿದೆ. ಇಡೀ ರಾಜ್ಯದಲ್ಲಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ (Congress), ಜನರ ವಿಶ್ವಾಸ ಗಳಿಸಲು ಹೊರಟಿದೆ. ಬಿಜೆಪಿಯವರು ಬರೀ ಸುಳ್ಳು, ಮೋಸ, ಧರ್ಮದ ಹೆಸರಿನಲ್ಲಿ, ಹಲಾಲ್ ಹೆಸರಿನಲ್ಲಿ ರಾಜಕೀಯ ಮಾಡುತ್ತಾ, ಅಮಾಯಕರ ಪ್ರಾಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಜನರು ಕೂಡ ಕಾಂಗ್ರೆಸ್ಸೇ (Congress) ಚೆನ್ನಾಗಿತ್ತು ಎಂದು ಹೇಳುತ್ತಿದ್ದು, ಬಿಜೆಪಿ (BJP) ತಿರಸ್ಕರಿಸುತ್ತಾರೆಂದು ಹೇಳಿದರು.
ಸೊರಬ ಶಾಸಕರು ತಹಶೀಲ್ದಾರ್ ಕಚೇರಿಯ ನಾಟಗಳನ್ನು ಅಕ್ರಮವಾಗಿ ಸಾಗಿಸಿದ್ದು, ಕೋಟ್ಯಂತರ ರೂ. ಬೆಲೆ ಬಾಳುವ ನಾಟವನ್ನು ಸಾಗಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಂತಹ ಕಳ್ಳರನ್ನು ದೂರವಿಟ್ಟು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.