ಲಂಡನ್: ಮೇ 6ರಂದು ಬ್ರಿಟನ್ನ ನೂತನ ದೊರೆ 3ನೇ ಚಾರ್ಲ್ಸ್ ಅವರಿಗೆ ಪಟ್ಟಾಭಿಷೇಕ ನಡೆಯಲಿದ್ದು, ಈ ಮೂಲಕ 70 ವರ್ಷಗಳ ಬಳಿಕ ದೇಶವು ಅದ್ಧೂರಿ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ.
ರಾಣಿ 2ನೇ ಎಲಿಜಬೆತ್ ಅವರು ನಿಧನರಾದ ಎಂಟು ತಿಂಗಳ ಬಳಿಕ ಈ ಪಟ್ಟಾಭಿಷೇಕ ನಡೆಯುತ್ತಿದ್ದು, ಸೆಂಟ್ರಲ್ ಲಂಡನ್ ಚರ್ಚ್ನಲ್ಲಿ ಪಟ್ಟಕ್ಕೇರುವ 40ನೇ ದೊರೆಯಾಗಿ ಚಾರ್ಲ್ಸ್ ಇತಿಹಾಸ ಬರೆಯಲಿದ್ದಾರೆ.
ಬ್ರಿಟನ್ಗೆ ಮಾತ್ರವಲ್ಲ, ಕಾಮನ್ವೆಲ್ತ್ನ 14 ದೇಶಗಳಿಗೂ ಅವರೇ ದೊರೆ ಆಗಿರುತ್ತಾರೆ. ಅವರ ಎರಡನೇ ಪತ್ನಿ ಕೆಮಿಲ್ಲಾ ಅವರು ಪಟ್ಟದ ರಾಣಿ ಆಗಿರಲಿದ್ದಾರೆ. ಕ್ರಿ.ಶ.1066ರಲ್ಲಿ ದೊರೆ 1ನೇ ವಿಲಿಯಂ ಅವರು ಇಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು.
ಬ್ರಿಟನ್ನ ಒಂದು ತಲೆಮಾರು ದೊರೆಯ ಪಟ್ಟಾಭಿಷೇಕ ಕಣ್ತುಂಬಿಕೊಳ್ಳುವುದರಿಂದ ಬಹುತೇಕ ವಂಚಿತವಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಈ ಹಿಂದಿನ ಪಟ್ಟಾಭಿಷೇಕ ನಡೆದುದು 1953ರಲ್ಲಿ. ಆಂದು ಎಲಿಜಬೆತ್ ಅವರ ಪಟ್ಟಾಭಿಷೇಕಕ್ಕೆ 9.12 ಲಕ್ಷ ಪೌಂಡ್ (ಈಗಿನ ಕರೆನ್ಸಿ ಮೌಲ್ಯದಲ್ಲಿ ಸುಮಾರು ₹ 204 ಕೋಟಿ) ಖರ್ಚಾಗಿತ್ತು. ಈ ಬಾರಿ ಪಟ್ಟಾಭಿಷೇಕಕ್ಕೆ ಅತಿಯಾದ ದುಂದುವೆಚ್ಚ ಮಾಡುವುದಿಲ್ಲ ಎಂದು ಸಚಿವ ಒಲಿವರ್ ಡೌಂಡೆನ್ ಹೇಳಿದ್ದರೂ, 74 ವರ್ಷದ ಜಾರ್ಲ್ಸ್ ಅವರ ಪಟ್ಟಾಭಿಷೇಕ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯಕ್ರಮಗಳು ಸಿದ್ದತೆ ನಡೆಯುತ್ತಿದೆ.