ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಗಂಭೀರ ಎಚ್ಚರಿಕೆ ನೀಡಿದೆ.
ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರು ಬರುತ್ತಿರುವ ಬಗ್ಗೆ ಗಂಭೀರವಾಗಿ ಮತ್ತು ತುರ್ತಾಗಿ ಗಮನ ಹರಿಸುವಂತೆ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಇಂಥ ಜನರಿಗೆ ವೀಸಾ ನೀಡದಂತೆ ಹಾಗೂ ಇವರು ಭಿಕ್ಷಾಟನೆಗಾಗಿ ತನ್ನ ದೇಶ ಪ್ರವೇಶಿಸದಂತೆ ತಡೆಯಬೇಕು ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಸೌದಿ ಅರೇಬಿಯಾ ಸೂಚನೆ ನೀಡಿದೆ.
ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆಂದು ಸೌದಿ ಅರೇಬಿಯಾಗೆ ಬರುವ ಕೆಲ ಪಾಕಿಸ್ತಾನಿಯರು ಅಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ದೇಶದಲ್ಲಿ ಭಿಕ್ಷೆ ಬೇಡುತ್ತಿದ್ದ ಹಲವಾರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದ ಸೌದಿ ಸರ್ಕಾರ ಅವರನ್ನು ಗಡಿಪಾರು ಮಾಡಿದೆ. ಅಲ್ಲದೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಬರುವ ಪಾಕಿಸ್ತಾನಿ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸೌದಿ ಅರೇಬಿಯಾ ಗಂಭೀರ ಕಳವಳ ವ್ಯಕ್ತಪಡಿಸಿದೆ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಮೂಲಗಳು ದೃಢಪಡಿಸಿವೆ. ಪರಿಸ್ಥಿತಿ ನಿಯಂತ್ರಿಸದಿದ್ದರೆ, ಅದು ಪಾಕಿಸ್ತಾನದ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.
ಉಮ್ರಾ ಪ್ರವಾಸಕ್ಕೆ ಅನುಕೂಲ ಮಾಡಿಕೊಡುವ ಟ್ರಾವೆಲ್ ಏಜೆನ್ಸಿಗಳನ್ನು ನಿಯಂತ್ರಿಸಲು, ವೀಸಾ ನೀಡುವ ವಿಷಯದಲ್ಲಿ ಅವುಗಳ ಮೇಲೆ ಕಾನೂನು ಮೇಲ್ವಿಚಾರಣೆ ನಡೆಸಲು ಇಸ್ಲಾಮಾಬಾದ್ನ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ‘ಉಮ್ರಾ ಕಾಯ್ದೆ’ ಯನ್ನು ಜಾರಿಗೆ ತಂದಿದೆ.