ಹಿಂದೆ ಪ್ರತಿ ಮನೆಯಲ್ಲೂ ಸೀಮೆ ಎಣ್ಣೆಯ ದೀಪ ಉರಿಯುತ್ತಿತ್ತು. ಕಾಲ ಬದಲಾದಂತೆ ಸೀಮೆ ಎಣ್ಣೆ ದೀಪದ ಬದಲು ಮೇಣದಬತ್ತಿ ಲಗ್ಗೆ ಇಡ್ತು.
ಈಗ ನಗರ – ಹಳ್ಳಿ ಸೇರಿದಂತೆ ಎಲ್ಲ ಕಡೆ ಯುಪಿಎಸ್ ಬಂದಿದೆ. ಅನೇಕರ ಮನೆಯಲ್ಲಿ ನೀವು ಇದನ್ನು ನೋಡಬಹುದು. ಮತ್ತೆ ಕೆಲವರು ಚಾರ್ಜಿಂಗ್, ಸೆಲ್ ಹಾಕಬಲ್ಲ ದೀಪವನ್ನು ತುರ್ತುಪರಿಸ್ಥಿತಿಗೆ ಇಟ್ಟುಕೊಂಡಿರುತ್ತಾರೆ. ಹಾಗಂತ ಮೇಣದಬತ್ತಿ ತನ್ನ ಸ್ಥಾನ ಕಳೆದುಕೊಂಡಿಲ್ಲ.
ದೀಪಾವಳಿ, ಕ್ರಿಸ್ ಮಸ್ ಸಂದರ್ಭದಲ್ಲಿ ಮೇಣದಬತ್ತಿ (Candles) ಗೆ ಬೇಡಿಕೆ ಹೆಚ್ಚು. ನಾವು ಬೆಳಕು ನೀಡಲಿ ಎಂದು ಬೆಳಗಿಸುವ ಈ ಮೇಣದಬತ್ತಿ ಕೂಡ ನಮ್ಮ ಆರೋಗ್ಯ ವನ್ನು ಹಾಳು ಮಾಡುತ್ತದೆ ಅಂದ್ರೆ ನೀವು ನಂಬಲೇಬೇಕು. ನೀವೂ ಮನೆಯಲ್ಲಿ ಮೇಣದ ಬತ್ತಿಯನ್ನು ಬೆಳಗಿಸುತ್ತಿದ್ದರೆ ಈಗ ನಾವು ಹೇಳುವ ಮುಖ್ಯ ವಿಷ್ಯವನ್ನು ನೆನಪಿಟ್ಟುಕೊಳ್ಳಿ.
ನಮ್ಮ ಶ್ವಾಸಕೋಶ ದ ಆರೋಗ್ಯ ಬಹಳ ಮುಖ್ಯ. ಅನಾರೋಗ್ಯ ಶ್ವಾಸಕೋಶ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಎಕ್ಸ್ ರೇ ಮಾಡಿದಾಗ ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಹೇಳ್ಬಹುದು. ಧೂಮಪಾನ ಮಾಡಿದಾಗ, ಮಾಲಿನ್ಯದಿಂದ, ಕೆಟ್ಟ ಆಹಾರ ಸೇವನೆ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಇದ್ರಿಂದ ಶ್ವಾಸಕೋಶ ಕಪ್ಪಾಗುತ್ತದೆ. ಬರೀ ವಾಯು ಮಾಲಿನ್ಯ ನಿಮ್ಮ ಮನೆಯ ಹೊರಗೆ ಆಗಬೇಕಾಗಿಲ್ಲ. ನಿಮ್ಮ ಮನೆಯೊಳಗೆ ನೀವು ಬೆಳಗುವ ಮೇಣದಬತ್ತಿ ಹೊಗೆ ಕೂಡ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಬಗ್ಗೆ ಆರ್ಹಸ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ವಿಭಾಗ ಅಧ್ಯಯನ ನಡೆಸಿದೆ. ಅಧ್ಯಯನದ ವರದಿ ಪ್ರಕಾರ, ಮೇಣದಬತ್ತಿ ಹೊಗೆ ಅಸ್ತಮಾ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂಬುದು ಪತ್ತೆಯಾಗಿದೆ.
ಅಸ್ತಮಾದಿಂದ ಬಳಲುವ ಜನರು ಮನೆಯಲ್ಲಿದ್ದರೆ ಮೇಣದಬತ್ತಿಯನ್ನು ಉರಿಸಬೇಡಿ. ಈ ಹೊಗೆ ಶ್ವಾಸಕೋಶದಲ್ಲಿ ನೆಲೆಗೊಳ್ಳಬಹುದು ಮತ್ತು ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಉಸಿರುಗಟ್ಟುವಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಮೇಣದಬತ್ತಿಯ ಹೊಗೆ ಡಿಎನ್ಎಗೆ ಹಾನಿ ಮಾಡುತ್ತದೆ ಮತ್ತು ರಕ್ತದ ಉರಿಯೂತವನ್ನು ಉಂಟುಮಾಡುತ್ತದೆ ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ.