ಮತದಾನದ ದಿನ ಹತ್ತಿರಕ್ಕೆ ಬಂದಿದೆ. ಮೇ 10ರಂದು ಮತದಾನಕ್ಕಾಗಿ ಇಡೀ ಕರ್ನಾಟಕವೇ ಸಜ್ಜುಗೊಂಡಿದೆ. ಆದರೆ, ಅನೇಕ ಮತದಾರರಿಗೆ ತಮ್ಮ ಬೂತ್ ಯಾವುದು ಎಂಬುದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಯಾವ ಕಡೆಯಿಂದ ಹೋಗಬೇಕು ಎಂಬಿತ್ಯಾದಿ ಗೊಂದಲಗಳಿರುತ್ತವೆ. ಅಷ್ಟೇ ಅಲ್ಲ, ಇನ್ನೂ ಹಲವಾರು ಮಂದಿಗೆ ತಾವು ಮತ ಚಲಾಯಿಸುವ ಬೂತ್ ಅಥವಾ ಅಲ್ಲಿಗೆ ಹೋಗುವ ದಾರಿ ಎರಡೂ ಗೊತ್ತಿದ್ದರೂ, ವೃದ್ಧ ಮತದಾರರನ್ನು ಕರೆದುಹೋಗುವ ಜವಾಬ್ದಾರಿಯಿರುತ್ತದೆ, ವಿಕಲ ಚೇತನರಿಗೆ ಮತಗಟ್ಟೆಗಳಲ್ಲಿ ತಮಗೆ ವ್ಹೀಲ್ ಚೇರ್ ನಂಥ ಸೌಲಭ್ಯಗಳಿವಿಯೇ ಎಂಬ ಬಗ್ಗೆ ಪ್ರಶ್ನೆಗಳಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಕೊಡುವ ಸಲುವಾಗಿ, ಚುನಾವಣಾ ಆಯೋಗವು ‘ಚುನಾವಣಾ’ ಎಂಬ ಮೊಬೈಲ್ ಅಪ್ಲಿಕೇಷನ್ ಕೂಡ ಬಿಡುಗಡೆ ಮಾಡಿದೆ.
ಕರ್ನಾಟಕ ಚುನಾವಣಾ ಮಾಹಿತಿ ಎಂಬ ವೆಬ್ ಸೈಟ್ ಕೂಡ ರೂಪಿಸಲಾಗಿದ್ದು, ಚುನಾವಣಾ ಆ್ಯಪ್ ಇದೇ ವೆಬ್ ಸೈಟ್ ಅಡಿಯಲ್ಲಿ ಕೆಲಸ ಮಾಡುತ್ತದೆ. ಈ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ಮತದಾರರು ತಮ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಹಾಗೂ ಇತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಚುನಾವಣಾ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ. ಆ್ಯಪ್ ಇನ್ ಸ್ಟಾಲ್ ಮಾಡಿದ ನಂತರ, ಆ್ಯಪ್ ಓಪನ್ ಮಾಡಿದಾಗ, ಅದರಲ್ಲಿ ಹೋಂ ಪೇಜ್ ನಲ್ಲೇ ಮತಗಟ್ಟೆ ತಿಳಿಯಲು ಎರಡು ಕಡೆ ಆಯ್ಕೆಗಳನ್ನು ನೀಡಲಾಗಿರುತ್ತದೆ. ಅಲ್ಲಿ, ಹೆಸರು/ಚುನಾವಣಾ ಗುರುತಿನ ಸಂಖ್ಯೆಯ ಮೂಲಕ ಹುಡುಕಿ ಹಾಗೂ ನಿಮ್ಮ ಮತಗಟ್ಟೆಯನ್ನು ತಿಳಿಯಿರಿ ಎಂಬ ಎರಡು ಆಯ್ಕೆಗಳಿರುತ್ತವೆ. ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿದರೂ ನಿಮ್ಮ ಮುಂದಿನ ಹಾದಿ ಸುಲಭ.
ಇಲ್ಲವೇ, ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ನಿಮ್ಮ ಮತಗಟ್ಟೆ ತಿಳಿಯಿರಿ ಎಂಬ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ಮುಂದೆ ಸಿಗುವ Search by Epic No. ಅಥವಾ Search by Name ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ, ನಿಮ್ಮ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದಾಗಿದೆ.
ವೆಬ್ ಸೈಟ್ ಅಥವಾ ಆ್ಯಪ್ ಉಪಯೋಗ ಪಡೆಯಲು ಸಾಧ್ಯವಿಲ್ಲದವರು, 1950 / 180042551950 ಸಂಖ್ಯೆಗಳಿಗೆ ಕರೆ ಮಾಡಿ, ನಿಮ್ಮ ಮತಗಟ್ಟೆಯ ಬಗ್ಗೆ ಮಾಹಿತಿ ಪಡೆಯಬಹುದು.
ಹೆಸರು/ಚುನಾವಣಾ ಗುರುತಿನ ಸಂಖ್ಯೆಯ ಮೂಲಕ ಹುಡುಕಿ ಎಂಬ ಆಯ್ಕೆಯನ್ನು ನೀವು ಒತ್ತಿದರೆ, ಬೇರೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ, Search by Epic No. ಅಥವಾ Search by Name ಎಂಬ ಎರಡು ಆಯ್ಕೆಗಳು ಸಿಗುತ್ತವೆ. ಅವುಗಳಲ್ಲಿ Search by Epic No ಆಯ್ಕೆ ಮಾಡಿಕೊಂಡರೆ, ಹೆಚ್ಚು ಮಾಹಿತಿಗಳನ್ನು ತುಂಬುವ ಅವಶ್ಯಕತೆ ಇರುವುದಿಲ್ಲ. ಕೇವಲ ನಿಮ್ಮ ವೋಟರ್ ಐಡಿ ಸಂಖ್ಯೆಯನ್ನು ನಮೂದಿಸಿದರೆ ಸಾಕು ನಿಮ್ಮ ಮತಗಟ್ಟೆಯ ಮಾಹಿತಿಯು ನಿಮಗೆ ಲಭ್ಯವಾಗುತ್ತದೆ.
ಹೋಂ ಪೇಜ್ ನಲ್ಲಿ ನಿಮ್ಮ ಮತಗಟ್ಟೆ ತಿಳಿಯಿರಿ ಒತ್ತಿದಾಗ ಮೂಡುವ Search by Epic No. ಅಥವಾ Search by Name ಎಂಬ ಎರಡು ಆಯ್ಕೆಗಳು ಇರುವ ವೆಬ್ ಪುಟದಲ್ಲೇ ನಿಮ್ಮ ಚುನಾವಣಾ ಗುರುತಿನ ಸಂಖ್ಯೆಯನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ನಿಮ್ಮ ವೋಟರ್ ಐಡಿ ಸಂಖ್ಯೆಯನ್ನು ಹಾಕಿದರೆ, ಅಲ್ಲಿ ನಿಮ್ಮ ಗುರುತಿನ ಚೀಟಿಯ ಇ- ಪ್ರತಿ ಮೂಡುತ್ತದೆ. ಅದರ ಕೆಳಗಡೆಯೇ ನಿಮ್ಮ ಮತಗಟ್ಟೆಯ ವಿಳಾಸವನ್ನು ನೀಡಲಾಗುತ್ತದೆ.
ಚುನಾವಣಾ ಆ್ಯಪ್ > ಚುನಾವಣಾ ಗುರುತಿನ ಸಂಖ್ಯೆ/ಹೆಸರಿನ ಮೂಲಕ Search by name ಆಯ್ಕೆಯನ್ನು ಆಯ್ಕೆ ಮಾಡಿ.
ಆಗ ಮೂಡುವ ಹೊಸತೊಂದು ಪುಟದಲ್ಲಿ ನಿಮ್ಮ ಜಿಲ್ಲೆ, ನಿಮ್ಮ ವಿಧಾನಸಭಾ ಕ್ಷೇತ್ರ, ನಿಮ್ಮ ಹೆಸರು, ನಿಮ್ಮ ಸಂಬಂಧಿಕರ ಹೆಸರು (ವೋಟರ್ ಐಡಿ ಕಾರ್ಡಿನಲ್ಲಿ ನಮೂದಿಸುವಂಥ ತಂದೆ/ತಾಯಿ/ಗಂಡನ ಹೆಸರು) ಹಾಕಿ.
ಆನಂತರ, ನಿಮ್ಮ ಲಿಂಗವನ್ನು ಆಯ್ಕೆ ಮಾಡಿ.
ಆಗ, ನಿಮ್ಮ ವೋಟರ್ ಐಡಿ ಇ ಕಾಪಿ ಮೂಡುತ್ತದೆ. ಅದರ ಕೆಳಭಾಗದಲ್ಲಿ ನಿಮ್ಮ ಮತಗಟ್ಟೆಯ ವಿವರವಿರುತ್ತದೆ. ಅಲ್ಲೇ ಕೆಳಗೆ ಇಂಗ್ಲೀಷ್ ಐ (i) ಎಂಬ ಚಿಹ್ನೆಯಿದ್ದು, ಅದನ್ನು ಕ್ಲಿಕ್ ಮಾಡಿದರೆ, ಬೇರೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ವೋಟರ್ ಐಡಿಯ ಮಾಹಿತಿ ಕಾಣುತ್ತದೆ. ಅದೇ ಪಟ್ಟಿಯಲ್ಲಿ ಕೆಳಗಡೆ ನೀವು ಮತ ಚಲಾಯಿಸಲು ಹೋಗಬೇಕಾದ ಮತಗಟ್ಟೆಯ ವಿಳಾಸವಿರುತ್ತದೆ.
ಆ್ಯಪ್ ನಲ್ಲಿ ಕೇವಲ ಮತಗಟ್ಟೆಯ ವಿವರಗಳನ್ನು ಮಾತ್ರ ಪಡೆಯವುದಲ್ಲ. ನೀವಿರುವ ಸ್ಥಳದಿಂದ ಮತಗಟ್ಟೆಗೆ ತಲುಪಲು ಇರುವ ದಾರಿಯನ್ನೂ ಗೂಗಲ್ ಮ್ಯಾಪ್ ನ ಸಹಾಯದಿಂದ ಅರಿತುಕೊಳ್ಳಬಹುದಾಗಿದೆ. ಮೇಲೆ ತಿಳಿಸಿದಂತೆ, ನೀವು ನಿಮ್ಮ ಮತಗಟ್ಟೆಯ ಮಾಹಿತಿಯನ್ನು ಪಡೆದಾಗ ಅಲ್ಲೇ ಕೆಳಗಡೆ ಪತ್ತೆ ಮಾಡಿ ಎಂಬ ಚಿಹ್ನೆಯಿದ್ದು ಅದನ್ನು ಒತ್ತಿದರೆ ಅದು ನಿಮಗೆ ಗೂಗಲ್ ಮ್ಯಾಪ್ ಗೆ ಕೊಂಡೊಯ್ಯುತ್ತದೆ. ನೀವಿರುವ ಲೊಕೇಷನ್ ಹಾಗೂ ನಿಮ್ಮ ಮತಗಟ್ಟೆಯ ಲೋಕೇಷನ್ ನಡುವಿನ ದೂರವನ್ನು ತೋರಿಸುತ್ತದೆ. ಅಲ್ಲೇ ಇರುವ ಡೈರೆಕ್ಷನ್ ಎಂಬ ಐಕಾನ್ ಕ್ಲಿಕ್ ಮಾಡಿದರೆ ನಿಮಗೆ ಗೂಗಲ್ ಮ್ಯಾಪ್ ಮೂಲಕ ದಾರಿ ತೋರಿಸಲಾಗುತ್ತದೆ.
ಈ ಮೇಲಿನ ಆಯ್ಕೆ ಬಿಟ್ಟು, ನಿಮಗೆ ನೀವಿರುವ ಲೋಕೇಷನ್ ನಿಂದ ಮತಗಟ್ಟೆಗೆ ಹೋಗುವ ಮತ್ತೊಂದು ದಾರಿಯನ್ನು ನೋಡಬೇಕೆಂದರೆ, ಚುನಾವಣಾ ಆ್ಯಪ್ ನಲ್ಲಿ ನಿಮ್ಮ ಮತಗಟ್ಟೆಯ ವಿವರ ಪಡೆದಾದ ಮೇಲೆ ಅಲ್ಲೇ ಕೆಳಗಡೆ ಇರುವ ನೇವಿಗೇಟ್ ಬಟನ್ ಒತ್ತಿದರೆ ಅದೂ ಸಹ ನಿಮಗೆ ನಿಮ್ಮ ಮತಗಟ್ಟೆಗೆ ಹಾಗೂ ನೀವಿರುವ ಸ್ಥಳದಿಂದ ಎಷ್ಟು ದೂರವಿದೆ, ಯಾವ ಕಡೆಯಿಂದ ಹೋಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.
ಅಲ್ಲದೆ, ಮತಗಟ್ಟೆಯ ಅಧಿಕಾರಿಗಳು, ಜಿಲ್ಲಾ, ತಾಲೂಕು – ಹೋಬಳಿಯ ಚುನಾವಣಾಧಿಕಾರಿಗಳ ಫೋನ್ ನಂಬರ್ ಗಳನ್ನೂ ನೀಡಲಾಗಿದೆ.