ಕರ್ನಾಟಕ ರಾಜ್ಯದ ಜನತೆ ಪ್ರತಿ ವರ್ಷವು ಸಹ ನವೆಂಬರ್ 1 ರಂದು ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ರಾಜ್ಯದ ಪ್ರತಿ ಗ್ರಾಮದಲ್ಲೂ, ಪ್ರತಿ ಶಾಲೆ, ಕಾಲೇಜು, ಕಚೇರಿ, ಕಂಪನಿಗಳಲ್ಲಿ ಆಚರಣೆ ಮಾಡುತ್ತಾರೆ. ಈ ದಿನದ ಮಹತ್ವವನ್ನು ಸಹ ಅರಿಯುವ ಕಾರ್ಯಕ್ರಮಗಳು ಎಲ್ಲೆಲ್ಲೂ ನಡೆಯುತ್ತವೆ.
ಸಮಸ್ತ ಕನ್ನಡಿಗರು ಕಾಯುತ್ತಿರುವ ಕನ್ನಡ ಹಬ್ಬ “ಕನ್ನಡ ರಾಜ್ಯೋತ್ಸವ”. ನಾಡಿನೆಲ್ಲೆಡೆ ಸಡಗರ, ಸಂಭ್ರಮ. ಎಲ್ಲೆಲ್ಲೂ ಕನ್ನಡದ ಬಾವುಟ, ತಾಯಿ ಭುವನೇಶ್ವರಿಗೆ ನಮನ. ನವೆಂಬರ್ 1ರಂದು ಕನ್ನಡಿಗರು ಈ ದಿನವನ್ನು ನಾಡಹಬ್ಬವಾಗಿ ಪ್ರತಿವರ್ಷ ಆಚರಿಸುತ್ತಾರೆ.
ಕನ್ನಡ ರಾಜ್ಯೋತ್ಸವದ ಇತಿಹಾಸ
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವಿಲೀನ ಮಾಡಲು ಒಪ್ಪಿದರು. ಹೀಗಾಗಿ 1950ರಲ್ಲಿ ಮೈಸೂರು ಭಾರತದ ಒಂದು ರಾಜ್ಯವಾಯಿತು.
ಭಾರತ ದೇಶದಲ್ಲಿ ರಾಜ್ಯಗಳ ವಿಲೀನಿಕರಣ ಪ್ರಕ್ರಿಯೆಯು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು. ನಂತರ 1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತಾಯವಾಯಿತು. ಕೂರ್ಗ್, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು.
ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡಲಾಯಿತು. ಆರಂಭದಲ್ಲಿ 19 ಜಿಲ್ಲೆಗಳು ಕರ್ನಾಟಕದಲ್ಲಿದ್ದವು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಸವಿ ನೆನಪಿಗಾಗಿಯೇ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. 1950ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾಷೆಯ ಆಧಾರದಲ್ಲಿ ದೇಶದ ಪ್ರಾಂತ್ಯಗಳನ್ನು ರಾಜ್ಯಗಳಾಗಿ ಪುನರ್ವಿಂಗಡನೆ ಮಾಡಲಾಯಿತು. 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ರಾಜ್ಯದ ಉತ್ತರ ಭಾಗದ ಬಹಳಷ್ಟು ಜನರಿಗೆ ಮೈಸೂರು ರಾಜ್ಯ ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡುವ ಇರಾದೆ ಇತ್ತು. ಹೀಗಾಗಿ 1973ರ ನವೆಂಬರ್ 1ರಂದು ಮೈಸೂರು ರಾಜ್ಯ ಎಂಬುದು ಅಧಿಕೃತವಾಗಿ ಕರ್ನಾಟಕ ರಾಜ್ಯವಾಯಿತು.
ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ರಾಜ್ಯ:
ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ 6ನೇ ಅತಿ ದೊಡ್ಡ ಹಾಗೂ ಜನಸಂಖ್ಯೆ ಆಧಾರದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಆಗುಂಬೆ ಹೀಗೆ ಹಲವಾರು ಪ್ರವಾಸಿ ತಾಣಗಳ ತವರೂರು ನಮ್ಮ ಕನ್ನಡ ನಾಡು. ಇನ್ನು ಮೈಸೂರು ನಗರ ನೂರಾರು ವರ್ಷ ಇತಿಹಾಸ ಹೊಂದಿರುವ ಸಾಂಸ್ಕೃತಿಕ ವೈಭವಕ್ಕೆ ಜೀವಂತ ಸಾಕ್ಷಿಯಾಗಿದೆ. ಕದಂಬರು, ಹೊಯ್ಸಳರು, ಚೋಳರು, ನಿಜಾಮರು ಹಾಗೂ ಒಡೆಯರ್ ರಾಜರು ಆಳಿದ ಭೂಮಿ ಕರ್ನಾಟಕ.
ಹಳದಿ-ಕೆಂಪು ಬಾವುಟ ನಮ್ಮದು:
ಕರ್ನಾಟಕ ರಾಜ್ಯವು ತನ್ನದೇ ಆದ ಹಳದಿ-ಕೆಂಪು ಬಣ್ಣದ ಸಾಂಸ್ಕೃತಿಕ ಬಾವುಟವನ್ನು ಹೊಂದಿದೆ. ಹಿಂದಿನ ಕಾಲದ ಕನ್ನಡ ಹೋರಾಟಗಾರ ಎಂ. ರಾಮಮೂರ್ತಿಯವರು ಈ ಹಳದಿ-ಕೆಂಪು ಬಾವುಟವನ್ನು ಪ್ರಥಮ ಬಾರಿಗೆ ತಯಾರಿಸಿ, ಬಳಸಿದ್ದರು. ಅಂದಿನಿಂದ ಈ ಬಾವುಟ ಕೋಟ್ಯಂತರ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆರಂಭ:
ಕಲೆ, ಶಿಕ್ಷಣ, ಉದ್ಯಮ, ಸಾಹಿತ್ಯ, ಆಟೋಟ, ವೈದ್ಯಕೀಯ, ಸಾಮಾಜಿಕ ಕಾರ್ಯ, ಸಾರ್ವಜನಿಕ ಆಡಳಿತ ಹೀಗೆ ವಿಭಿನ್ನ ರಂಗಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಸಾಧಕರನ್ನು ಸನ್ಮಾನಿಸಲು 1966ರಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಯಿತು.
ವಿದೇಶಗಳಲ್ಲೂ ಕನ್ನಡದ ಕಂಪು:
ಇಂದು ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಾವಿದ್ದಲ್ಲಿಯೇ ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ತಾಯಿ ಭುವನೇಶ್ವರಿಯನ್ನು ಪೂಜಿಸುತ್ತಾರೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳ ಕನ್ನಡಿಗರು ಕೆಲಸ ಮಾಡುವ ದೊಡ್ಡ ದೊಡ್ಡ ಸಂಸ್ಥೆಗಳಲ್ಲೂ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿರುತ್ತದೆ.
ಕನ್ನಡ ರಾಜ್ಯೋತ್ಸವದ ಆಚರಣೆ ಹೇಗೆ ?
ಕನ್ನಡಿಗರ ಸ್ಫೂರ್ತಿಯ ಸಂಕೇತವಾಗಿರುವ ‘ಹಳದಿ-ಕೆಂಪು’ ಬಣ್ಣದ ಬಾವುಟವನ್ನು ರಾಜ್ಯದ ಎಲ್ಲೆಡೆ ಹಾರಿಸಲಾಗುತ್ತದೆ. ಕನ್ನಡ ನಾಡಗೀತೆ (ಜಯಭಾರತ ಜನನಿಯ ತನುಜಾತೆ )ಯನ್ನು ಹಾಡಲಾಗುತ್ತದೆ. ಸರಕಾರಿ ಕಚೇರಿ ಮತ್ತು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಯುವಕ ಮಂಡಲ, ಯುವ ಜನರ ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯೋತ್ಸವ ಆಚರಿಸುತ್ತವೆ.