ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ಹಿನ್ನೆಲೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi), ರಾಹುಲ್ ಗಾಂಧಿ(Rahul Gandhi), ಸಿದ್ದರಾಮಯ್ಯ(Siddaramaiah), ನಟಿ ರಮ್ಯಾ, ಶಿವರಾಜ್ ಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇಂದು(ಮೇ.6) ಕೂಡ ವಿವಿಧ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ, ರೋಡ್ ಶೋ ನಡೆಸಲಿದ್ದಾರೆ. ಹಾಗಿದ್ದರೆ ಯಾವ ನಾಯಕರು ಯಾವ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ? ಇಲ್ಲಿದೆ ಮಾಹಿತಿ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಇಂದು(ಮೇ.6) ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು, ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿ ಹಾಗೂ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಮಧ್ಯಾಹ್ನ 2 ಕ್ಕೆ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ , ಬಳಿಕ ಸಂಜೆ 4 ಕ್ಕೆ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಪರ ಮತಯಾಚನೆ ನಡೆಸಲಿದ್ದಾರೆ.
ಹುಬ್ಬಳ್ಳಿಗೆ ಬರಲಿದ್ದಾರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ
ಚುನಾವಣೆ ಘೋಷಣೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ಹುಬ್ಬಳ್ಳಿಗೆ ಸೋನಿಯಾ ಗಾಂಧಿ ಬರುತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಿಜೆಪಿ ಭದ್ರಕೋಟೆಗೆ ಎಂಟ್ರಿ ಕೊಡಲಿದ್ದು, ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿದ್ದ ಜಗದೀಶ್ ಶೆಟ್ಟರ್ ಗೆಲ್ಲಿಸಲು ಕಾಂಗ್ರೆಸ್ ವರಿಷ್ಠೆ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ. ಉತ್ತರ ಕರ್ನಾಟಕವನ್ನೇ ಟಾರ್ಗೆಟ್ ಮಾಡಿಕೊಂಡು ಹುಬ್ಬಳ್ಳಿಗೆ ಬರುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯ ಸೆಟ್ಲಮೆಂಟ್ನ ಹಾಕಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸಾಯಂಕಾಲ 6 ಗಂಟೆಯವರೆಗೆ ಭಾಗಿಯಾಗಲಿದ್ದಾರೆ. ಬಳಿಕ ಕಾರ್ಯಕ್ರಮ ಮುಗಿಸಿ ಮತ್ತೆ ಹುಬ್ಬಳ್ಳಿಯಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳಸಲಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರ
ಇಡೀ ದಿನ ಚಿಕ್ಕಮಗಳೂರು ಜಿಲ್ಲೆಯ 4 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಶೃಂಗೇರಿ ಕ್ಷೇತ್ರದ ಎನ್.ಆರ್ ಪುರದಿಂದ ಪ್ರಚಾರ ಆರಂಭಿಸಲಿರುವ ಸಿದ್ದು. ಶೃಂಗೇರಿ ,ಚಿಕ್ಕಮಗಳೂರು, ಕಡೂರು ತರೀಕೆರೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಬೆಳಗಾವಿಗೆ ಆಗಮಿಸಲಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್
ಕಿಚ್ಚ ಸುದೀಪ ಬೆಳಗಾವಿ ಪ್ರವಾಸ ಹಾಗೂ ಪ್ರಚಾರದ ಬಳಿಕ ಮತ್ತೋರ್ವ ಸ್ಟಾರ್ ನಟ ಡಾ.ಶಿವರಾಜ್ಕುಮಾರ್ ಬೆಳಗಾವಿಗೆ ಬರಲಿದ್ದು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ಪ್ರಚಾರ ಮಾಡಲಿದ್ದಾರೆ. ಶಿಂಧೊಳ್ಳಿ ಹಾಗೂ ಹೊನ್ನಿಹಾಳ ಗ್ರಾಮದಲ್ಲಿ ಡಾ.ಶಿವರಾಜ್ ಕುಮಾರ್ ರೋಡ್ ಶೋ ನಡೆಸುವುದರ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಪರ ಶಿವಣ್ಣ ಪ್ರಚಾರ ಮಾಡಲಿದ್ದಾರೆ. ಈ ಕುರಿತು ಶಿವಣ್ಣ ವಿಡಿಯೋ ಮಾಡಿದ್ದಾರೆ. ಇನ್ನು ಬಳಿಕ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಹೊರಲಿರುವ ಶಿವಣ್ಣ ಜಗದೀಶ್ ಶೆಟ್ಟರ್ ಪರ ರೋಡ್ಶೋ ಮಾಡಲಿದ್ದಾರೆ.