ಬೆಂಗಳೂರು ;- ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ರಾಜ್ಯ ಜನರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ.
ಉಚಿತ ಕರೆಂಟ್ ಸೌಲಭ್ಯ ಪಡೆಯಲು ನಾ ಮುಂದು, ತಾ ಮುಂದು ಎಂದು ಅರ್ಜಿ ಸಲ್ಲಿಸಲು ಜನತೆ ಮುಗಿಬಿದ್ದಿದ್ದಾರೆ. ಇದುವರೆಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡವರ ಸಂಖ್ಯೆ ಇಂದಿಗೆ 50 ಲಕ್ಷ ಗಡಿ ದಾಟಿದೆ.
ಜೂನ್ 18 ರಿಂದ ಆರಂಭವಾದ ನೋಂದಣಿ ಪ್ರಕ್ರಿಯೆ ಶರವೇಗ ಪಡೆದುಕೊಂಡಿದ್ದು, ಭಾನುವಾರ ಸಂಜೆ 4 ಗಂಟೆಯವರೆಗೆ 51,17,693 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ವಿಧಾನವನ್ನು ಅತ್ಯಂತ ಸುಲಭಗೊಳಿಸಿರುವುದರಿಂದ, ಗ್ರಾಹಕರು ಅತ್ಯಂತ ಉತ್ಸುಕತೆಯನ್ನು ತೋರುತ್ತಿದ್ದು, ಪ್ರತಿದಿನವೂ ಲಕ್ಷದೋಪಾದಿಯಲ್ಲಿ ನೋಂದಣಿಯ ಪ್ರಮಾಣ ಹೆಚ್ಚುತ್ತಿದೆ.
ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಛೇರಿ, ನಾಡಕಛೇರಿ ಹಾಗೂ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಸಂಪೂರ್ಣ ಉಚಿತ. ಗ್ರಾಹಕರು ಮೇಲ್ಕಂಡ ವೆಬ್’ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್’ಸೈಟ್ ಬಳಸದೇ ಇರುವುದು ಸೂಕ್ತ.
ಇದಲ್ಲದೇ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.