ಅಯೋಧ್ಯೆ: ಬಾಲರಾಮನ ಮಂದಿರಕ್ಕೆ 25 ಕೆಜಿ ಚಿನ್ನ (Gold) ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಸುಮಾರು 25 ಕೋಟಿ ರೂ. ದೇಣಿಗೆ ಬಂದಿದೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ರಾಮಮಂದಿರ ಟ್ರಸ್ಟ್ನ ಅಧಿಕಾರಿ ಪ್ರಕಾಶ್ ಗುಪ್ತಾ ಮಾತನಾಡಿ, 25 ಕೋಟಿ ರೂ. ಮೊತ್ತದಲ್ಲಿ ಚೆಕ್ಗಳು, ಡ್ರಾಫ್ಟ್ಗಳು ಮತ್ತು ದೇವಸ್ಥಾನದ ಟ್ರಸ್ಟ್ನ ಕಚೇರಿಯಲ್ಲಿ ಠೇವಣಿ ಮಾಡಿದ ನಗದು ಮತ್ತು ಪೆಟ್ಟಿಗೆಗಳಲ್ಲಿ ಹಾಕಲಾದ ಕಾಣಿಕೆ ಸೇರಿದೆ.
ಇನ್ನೂ ಟ್ರಸ್ಟ್ನ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಮಾಡಿದ ಆನ್ಲೈನ್ ವಹಿವಾಟಿನ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ. ಜನವರಿ 23 ರಿಂದ ಒಟ್ಟು 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ರಾಮಭಕ್ತರ ಶ್ರದ್ಧೆ ಎಷ್ಟರಮಟ್ಟಿಗಿದೆ ಎಂದರೆ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಬಳಸಲಾಗದಷ್ಟು ಬೆಳ್ಳಿ ಮತ್ತು ಚಿನ್ನದಿಂದ ಮಾಡಿದ ವಸ್ತುಗಳನ್ನು ರಾಮಲಲ್ಲಾಗೆ ದಾನ ಮಾಡುತ್ತಿದ್ದಾರೆ. ಇಷ್ಟಾದರೂ ಭಕ್ತರ ಭಕ್ತಿಯನ್ನು ಪರಿಗಣಿಸಿ ರಾಮಮಂದಿರ ಟ್ರಸ್ಟ್ ಚಿನ್ನಾಭರಣ, ಪಾತ್ರೆ, ಸಾಮಗ್ರಿಗಳನ್ನು ಸ್ವೀಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ರಾಮನವಮಿಯಂದು 50 ಲಕ್ಷ ಜನ ಭಕ್ತರು ಸೇರುವ ಸಾಧ್ಯತೆ ಇದೆ. ಆ ಸಮಯದಲ್ಲಿ ದೇಣಿಗೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ವೇಳೆ ಭಕ್ತರು ನೀಡಿದ ಕಾಣಿಕೆಯನ್ನು ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ಸ್ವಯಂಚಾಲಿತ ಹೈಟೆಕ್ ಯಂತ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದ್ದಾರೆ. ರಶೀದಿಗಳನ್ನು ನೀಡಲು ಟ್ರಸ್ಟ್ನಿಂದ ಹತ್ತಾರು ಗಣಕೀಕೃತ ಕೌಂಟರ್ಗಳನ್ನು ಮಾಡಲಾಗಿದೆ.
ರಾಮಮಂದಿರ ಟ್ರಸ್ಟ್ನಿಂದ ದೇವಾಲಯದ ಆವರಣದಲ್ಲಿ ಹೆಚ್ಚುವರಿ ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗುತ್ತಿದೆ. ಶೀಘ್ರದಲ್ಲೇ ರಾಮಮಂದಿರದ ಆವರಣದಲ್ಲಿ ದೊಡ್ಡ ಮತ್ತು ಸುಸಜ್ಜಿತ ಎಣಿಕೆ ಕೊಠಡಿಯನ್ನು ನಿರ್ಮಿಸಲಾಗುತ್ತದೆ. ಇನ್ನೂ ರಾಮಲಲ್ಲಾಗೆ ಉಡುಗೊರೆಯಾಗಿ ಸ್ವೀಕರಿಸಿದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮತ್ತು ಅವುಗಳ ನಿರ್ವಹಣೆಗೆ ಭಾರತ ಸರ್ಕಾರದ ಟಂಕಸಾಲೆಗೆ ಹಸ್ತಾಂತರಿಸಲಾಗಿದೆ ಎಂದು ರಾಮಮಂದಿರ ಟ್ರಸ್ಟ್ನ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ.