ನವದೆಹಲಿ: ಕಳೆದ ವರ್ಷ ಭದ್ರತಾ ಪಡೆಗಳು (Indian Army) ನಡೆಸಿದ ಎನ್ಕೌಂಟರ್ನಲ್ಲಿ 187 ಉಗ್ರರು (Terrorist) ಹತರಾಗಿದ್ದರು. ಈ ವರ್ಷ ಜುಲೈ 20ರವರೆಗೆ 35 ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಈ ಪೈಕಿ 27 ವಿದೇಶಿ ಹಾಗೂ 8 ಸ್ಥಳೀಯ ಭಯೋತ್ಪಾದಕರು ಸೇರಿದ್ದಾರೆ ಎಂದು ವರದಿಯಾಗಿದೆ.
ಸೇನಾ ಮೂಲಗಳು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಭದ್ರತಾ ಪಡೆಗಳ ಗುಂಡಿಗೆ ಹತರಾದ ಭಯೋತ್ಪಾದಕರ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮಾಹಿತಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯಾವುದೇ ದೊಡ್ಡ ಒಳನುಸುಳುವಿಕೆ ನಡೆದಿಲ್ಲ. ಆದರೂ ಕಾಶ್ಮೀರದಲ್ಲಿ 71 ಪಾಕಿಸ್ತಾನಿ ಭಯೋತ್ಪಾದಕರು ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಭಯೋತ್ಪಾದಕರ ಶರಣಾಗತಿಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ಹೆಚ್ಚಿನ ಯಶಸ್ಸು ಇಲ್ಲಿ ಸಿಕ್ಕಿಲ್ಲ. 2018 ರಲ್ಲಿ ಒಬ್ಬ, 2020 ರಲ್ಲಿ 8, 2021 ರಲ್ಲಿ 2 ಮತ್ತು 2022 ರಲ್ಲಿ ಕೇವಲ ಇಬ್ಬರು ಭಯೋತ್ಪಾದಕರು ಶರಣಾಗಿದ್ದಾರೆ. ಆಗಾಗ ಸ್ಥಳೀಯ ಯುವಕರು ನಾಪತ್ತೆಯಾಗುತ್ತಾರೆ. ಅವರನ್ನು ಕುಟುಂಬಸ್ಥರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹುಡುಕಾಟ ನಡೆಸುವ ಹೊತ್ತಿಗೆ ಆ ಯುವಕರು ಭಯೋತ್ಪಾದಕ ಸಂಘಟನೆಯ ಸದಸ್ಯನಂತೆ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ವೈರಲ್ ಆಗುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದಾರಿ ತಪ್ಪಿದ ಯುವಕರನ್ನು ಭಯೋತ್ಪಾದಕ ಸಂಘಟನೆಗಳು ಬ್ರೈನ್ ವಾಶ್ ಮಾಡುತ್ತವೆ. ಇದಾದ ಬಳಿಕವೂ ಯುವಕರು ಇನ್ನೂ ಸಂಪೂರ್ಣವಾಗಿ ಭಯೋತ್ಪಾದನೆಯ ಹಾದಿಯನ್ನು ಅನುಸರಿಸಲು ಸಿದ್ಧವಾಗಿಲ್ಲ ಮತ್ತು ಮುಖ್ಯವಾಹಿನಿಗೆ ಮರಳಲು ಬಯಸುತ್ತಾನೆ ಎಂದು ಸಂಘಟನೆಗಳು ಭಾವಿಸಿದಾಗ ಅಂತಹ ಯುವಕನ ಫೋಟೋವನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ವೈರಲ್ ಮಾಡುತ್ತಾರೆ. ಇದಾದ ನಂತರ ಯುವಕರು ಅತಂತ್ರದಲ್ಲಿ ಸಿಲುಕಿಕೊಂಡು ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳು 2018 ರಲ್ಲಿ 187, 2019 ರಲ್ಲಿ 121, 2020 ರಲ್ಲಿ 181, 2021 ರಲ್ಲಿ 142, 2022 ರಲ್ಲಿ 91 ಯುವಕರನ್ನು ನೇಮಕ ಮಾಡಿಕೊಂಡಿವೆ. ಸದ್ಯ 109 ಉಗ್ರರು ಸಕ್ರಿಯರಾಗಿದ್ದಾರೆ. ಇವರಲ್ಲಿ 38 ಮಂದಿ ಸ್ಥಳೀಯರು ಹಾಗೂ 71 ಮಂದಿ ವಿದೇಶಿಗರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಐಬಿ, ಸೇನೆ ಮತ್ತು ಇತರ ಏಜೆನ್ಸಿಗಳು ಭಯೋತ್ಪಾದಕರ ಅಡಗುತಾಣವನ್ನು ತಲುಪಲು ಪ್ರಯತ್ನಿಸುತ್ತಿವೆ. ಭೂಗತವಾಗಿರುವ ವಿದೇಶಿ ಭಯೋತ್ಪಾದಕರು ಹೈಬ್ರೀಡ್ ಭಯೋತ್ಪಾದಕರ ಮೂಲಕ ತಮ್ಮ ಟಾರ್ಗೆಟ್ನತ್ತ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ತಿಳಿದು ಬಂದಿದೆ.