ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪರೀಕ್ಷೆಗಿಳಿದಿದ್ದಾರೆ.
ಏಪ್ರಿಲ್ 3ರಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಶೋಭಾ ಕರಂದ್ಲಾಜೆ ಅವರು ತಮ್ಮ ಬಳಿ 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ. ಅಲ್ಲದೇ 1 ಕೆಜಿ ಚಿನ್ನದ ಬಿಸ್ಕೆಟ್ ಇದೆ ಎಂದು ತಿಳಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ(2019) ಈಗ ಹೋಲಿಸಿದರೆ ಐದು ವರ್ಷದಲ್ಲಿ ಶೋಭಾ ಅವರ ಆಸ್ತಿ ಮೌಲ್ಯದಲ್ಲಿ 6 ಕೋಟಿ ರೂ. ಹೆಚ್ಚಳವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಚರಾಸ್ತಿ 9,23,66,909 ರೂಪಾಯಿ ಮೌಲ್ಯ ಹಾಗೂ 6,78,97,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ. ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ತಮ್ಮ ನಾಪಮತ್ರದ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಶೋಭಾ ಕರಂದ್ಲಾಜೆ 4 ಕೋಟಿ ರೂ. ಸಾಲ ಇರುವುದಾಗಿ ತೋರಿಸಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ ಮಾಡಿರುವ ಶೋಭಾ ಕರಂದ್ಲಾಜೆ ಅವರು ಒಟ್ಟು 4.06 ಕೋಟಿ ರೂಪಾಯಿ ಲೋನ್ ಪಡೆದಿದ್ದಾರೆ. ಇನ್ನು ಇವರ ಬಳಿ 1,71,000 ರೂಪಾಯಿ ನಗದು ಹಣವಿದೆ. ಇವರ ವಾರ್ಷಿಕ ಆದಾಯವು 2022-23ರ ಸಾಲಿನಲ್ಲಿ 24.90 ಲಕ್ಷ ರೂಪಾಯಿ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಶೋಭಾ ಕರಂದ್ಲಾಜೆ ಅವರ ಬಳಿ ಹಣದ ಜೊತೆ ಚಿನ್ನಾಭರಣಗಳು ಇವೆ. ಬರೋಬ್ಬರಿ 1 ಕೆಜಿ ಚಿನ್ನದ ಬಿಸ್ಕಟ್ ಇದ್ದು, ಇದು ಸರಿಸುಮಾರು 68.40 ಲಕ್ಷ ರೂಪಾಯಿ ಮೌಲ್ಯವುಳ್ಳದ್ದಾಗಾಗಿದೆ. 650 ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳು ಇವೆ.
ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇದ್ದು. ಇವುಗಳಲ್ಲಿ ಎರಡು ಕ್ರಿಮಿನಲ್ ಕೇಸ್ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆಯಾಗಿದೆ.