ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆ ಬಹುತೇಕ ಖಚಿತವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕಾರ ಹಂಚಿಕೆ ಸೂತ್ರದಲ್ಲಿ ಮೊದಲಾರ್ಧ ಸಿದ್ದರಾಮಯ್ಯ ಸಿಎಂ ಆದರೆ, ದ್ವಿತೀಯಾರ್ಧದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ತಿಳಿದುಬಂದಿದೆ.
ಬುಧವಾರದವರೆಗೂ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿತ್ತು. ಉಭಯ ನಾಯಕರನ್ನು ಹೈಕಮಾಂಡ್ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ಪಟ್ಟು ಸಡಿಲಿಸಿದ್ದಿಲ್ಲ. ಆದರೆ, ಬುಧವಾರ ತಡರಾತ್ರಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದ ನೂತನ ಸಿಎಂ ಆಯ್ಕೆ ಸುಖಾಂತ್ಯ ಕಂಡಿದೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸ್ಥಾನ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಬುಧವಾರ ಸಂಜೆ ಸೋನಿಯಾ ಗಾಂಧಿ ಅವರು ಮಾತನಾಡಿದ ಬಳಿಕ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದಿದೆ ಎಂದು ಹೇಳಲಾಗಿದೆ. ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರೇ ಸದ್ಯಕ್ಕೆ ಮುಖ್ಯಮಂತ್ರಿಯಾಗಲಿ, ನೀವು ಡಿಸಿಎಂ ಆಗಿ. 30 ತಿಂಗಳ ಬಳಿಕ ನೀವು ಸಿಎಂ ಆಗುವಿರಂತೆ ಎಂದು ಭರವಸೆ ನೀಡಿದ ಬಳಿಕ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಅಧಿಕೃತವಾಗಿ ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಘೋಷಣೆ ಮಾಡಲಿದ್ದು, ಶನಿವಾರ ಮಧ್ಯಾಹ್ನ 12.30ಕ್ಕೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿದರೆ ನನಗೆ ಏನು ಬೇಡ, ನಾನು ಶಾಸಕನಾಗಿಯೇ ಉಳಿಯುತ್ತೇನೆ ಎಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು. ಆದ್ದರಿಂದ ಅವರನ್ನು ಸರ್ಕಾರದ ಭಾಗವನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸರ್ಕಸ್ ಮಾಡಿದೆ.
ಬುಧವಾರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ತಮ್ಮ ವಾದಗಳನ್ನು ಮಂಡಿಸಿದ್ದರು. ಆದರೆ, ಕೊನೆಗೆ ಶಾಸಕರ ಬೆಂಬಲ ಹೆಚ್ಚಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಗಾಂಧಿ ಸಂಧಾನ!
ಇನ್ನು, ಕರ್ನಾಟಕ ನೂತನ ಸಿಎಂ ಆಯ್ಕೆಯ ಕಸರತ್ತು ಸದ್ಯಕ್ಕೆ ಮುಗಿಯುವ ರೀತಿ ಕಾಣುತ್ತಿಲ್ಲ ಎಂದು ಗೊತ್ತಾದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಂಧಾನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಿಯಾಂಕಾ ಗಾಂಧಿ ಅವರು ಬುಧವಾರ ತಡರಾತ್ರಿ ಸದ್ಯದ ಪರಿಸ್ಥಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಿವರಿಸಿ ಮನವೊಲಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಮಧ್ಯಪ್ರವೇಶದ ಬಳಿಕ ನೂತನ ಸಿಎಂ ಆಯ್ಕೆಯ ಸರ್ಕಸ್ ಮುಗಿದಿದೆ.