ಸಿನಿಮಾ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ನಿಧನಕ್ಕೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದ ಶಿವರಾಮ್ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದರು.
1993ರಲ್ಲಿ ತೆರೆಕಂಡ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ಶಿವರಾಮ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇಂದಿಗೂ ಶಿವರಾಮ್ ನಟಿಸಿದ್ದ ಸಿನಿಮಾಗಳ ಹಾಡುಗಳು ಎವರ್ ಗ್ರೀನ್ ಹಾಡುಗಳಾಗಿ ಜನಮಾನಸದಲ್ಲಿ ಅಚ್ಚಳಿದಿವೆ.
ಬಡ ಕುಟುಂಬದಿಂದ ಬಂದ ಶಿವರಾಮ್ ಕೆಎಎಸ್ ಹಾಗೂ ಐಎಎಸ್ ಅಧಿಕಾರಿಯಾಗಿ ಸಾಧನೆ ಮಾಡಿದ್ದಾರೆ. ನಟ ಆಗಬೇಕು ಎಂಬ ಆಸೆ ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಸ್ನೇಹಿತರೊಬ್ಬರ ಜೊತೆ ಸುಮ್ಮನೇ ಮಾತನಾಡುವಾಗ ಸಿನಿಮಾ ಮಾಡಬೇಕು ಎಂಬ ಹಂಬಲ ಅವರಿಗೆ ಚಿಗುರಿತು. ಅದನ್ನು ಈಡೇರಿಸಿಕೊಳ್ಳಲು ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ಮೂಲಕ ಸಿನಿಮಾ ಹೀರೋ ಆದ ಮೊದಲ ಐಎಎಸ್ ಅಧಿಕಾರಿ ಎಂಬ ಖ್ಯಾತಿ ಸಿಕ್ಕಿತ್ತು. ಅಧಿಕಾರಿಯಾಗಿಯೂ ಜೊತೆಗೆ ನಟನಾಗಿಯೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
ಅಧಿಕಾರಿಯಾಗಿದ್ದುಕೊಂಡು ಸಿನಿಮಾದಲ್ಲಿ ನಟಿಸಬಾರದು ಎಂದು ಕೆಲವರು ತಕರಾರು ತೆಗೆದಿದ್ದರು. ಆದರೆ ಅದರ ವಿರುದ್ಧ ಶಿವರಾಮ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಗೆದ್ದರು. ನಟನೆ, ಕ್ರೀಡೆ ಇವೆಲ್ಲ ಹವ್ಯಾಸ. ಅದಕ್ಕೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಶಿವರಾಮ್ ಹೇಳುತ್ತಿದ್ದರು. ಅಧಿಕಾರಿಯಾಗಿ ನಿವೃತ್ತಿ ಹೊಂದುವ ತನಕವೂ ಅವರು ನಟನೆಯಲ್ಲಿ ತೊಡಗಿಕೊಂಡಿದ್ದರು. ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದ ಕೆಲಸ ಶುರುವಾಗಿದ್ದೇ ರಾಹುಕಾಲದಲ್ಲಿ! ಆ ಮೂಲಕ ಕೆಲವು ಮೂಢನಂಬಿಕೆಗಳನ್ನು ಅವರು ತೊಡೆದು ಹಾಕಲು ಪ್ರಯತ್ನಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿ ಶಿವರಾಮ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.