ವಿಶ್ವಕಪ್ ಮಹಾ ಸಮರ ಆರಂಭಕ್ಕೆ ಜಸ್ಟ್ 13 ದಿನಗಳಷ್ಟೇ ಬಾಕಿ ಉಳಿದಿದ್ದು, ಯಾರು ವಿಶ್ವ ಕಿರೀಟಕ್ಕೆ ಮುತ್ತಿಡ್ತಾರೆ ಎಂಬ ಲೆಕ್ಕಚಾರದ ಚರ್ಚೆ ಜೋರಾಗಿದೆ
ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬ ಜೋರು. ಅದೇ ಹೊತ್ತಿಗೆ ಈ ಬಾರಿ ಭಾರತದಲ್ಲಿ 13ನೆಯ ವಿಶ್ವಕಪ್ ಕ್ರಿಕೆಟ್ ಕೂಟವು ತೆರೆದುಕೊಳ್ಳುತ್ತಿದೆ. ಈ ಬಾರಿ ಆತಿಥ್ಯ ಕೂಡ ಭಾರತ ಅನ್ನೋದು ನಮಗೆ ಹೆಮ್ಮೆ. ಭಾರತ ಆತಿಥ್ಯ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆದರೂ ಕ್ರಿಕೆಟ್ ನಮ್ಮಲ್ಲಿ ಒಂದು ಧರ್ಮ ಎಂದೇ ಕರೆಯಲ್ಪಡುತ್ತದೆ. ಇಷ್ಟೊಂದು ಕ್ರಿಕೆಟ್ ಅಭಿಮಾನಿಗಳು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ! ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಿನಿಮಾ ಸ್ಟಾರ್ಗಳಿಗಿಂತ ಹೆಚ್ಚು ಜನಪ್ರಿಯರು. ಚುಟುಕು ಕ್ರಿಕೆಟ್ ಪಂದ್ಯಗಳು ಎಂದಾಗ ಭಾರತದ ಕ್ರಿಕೆಟ್ ಗ್ರೌಂಡುಗಳು ತುಂಬಿ ತುಳುಕುವುದು ಖಂಡಿತ. ಅದರಲ್ಲಿಯೂ ಭಾರತ ಪಾಕ್ ಪಂದ್ಯವು ನಡೆಯುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ (ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ, ಅಹ್ಮದಾಬಾದ್) ಯಾವ ರೀತಿ ತುಂಬಿ ನಿಲ್ಲಬಹುದು ಎಂದು ಊಹೆ ಮಾಡಲು ನಮಗೆ ಕಷ್ಟ ಆಗಬಹುದು. ಇಂದು ಎಲ್ಲ ಕ್ರಿಕೆಟ್ ತಂಡಗಳಲ್ಲಿಯೂ ಹೊಡಿ ಬಡಿ ಬ್ಯಾಟರ್ಗಳು ಇರುವ ಕಾರಣ ಈ ಬಾರಿಯ ಕ್ರಿಕೆಟ್ ದೀಪಾವಳಿ ಇನ್ನೂ ಹೆಚ್ಚು ಸದ್ದು ಮಾಡಬಹುದು.
ಈ ಬಾರಿ ಭಾರತ ತಂಡ ಹೇಗೆ?
1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಈಗಾಗಲೇ ವಿಶ್ವ ಕಪ್ ಗೆಲ್ಲಿಸಿಕೊಟ್ಟ ಕಪ್ತಾನರು. ಈ ಬಾರಿ ರೋಹಿತ್ ಶರ್ಮಾ ಕಪ್ತಾನ ಆಗಿ ಒಳ್ಳೆಯ ನಾಯಕತ್ವದ ಅರ್ಹತೆ ಹೊಂದಿದ್ದಾರೆ. ಮುಂಬೈ ತಂಡಕ್ಕೆ ಅತೀ ಹೆಚ್ಚು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಕಪ್ತಾನ ಅವರು. ಆದ್ದರಿಂದ ಭಾರತಕ್ಕೆ ನಾಯಕತ್ವದ ಸ್ಟ್ರಾಂಗ್ ಬೇಸ್ ಇದೆ. ಭಾರತದ ಅತ್ಯುತ್ತಮ ಆಟಗಾರ ರಾಹುಲ್ ದ್ರಾವಿಡ್ ಅವರ ಅಪಾರ ಅನುಭವ ಮತ್ತು ಕ್ರಿಕೆಟ್ ಪಾಠಗಳು ಭಾರತಕ್ಕೆ ವರವಾಗಿ ಬರುತ್ತವೆ. ಕೋಚಿಂಗ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ.
ಉತ್ತಮ ಸಮತೋಲನದ ತಂಡ
ಆರಂಭಿಕ ಆಟಗಾರರಾಗಿ ರೋಹಿತ್ ಮತ್ತು ಶುಭ್ಮನ್ ಗಿಲ್ ಏಷ್ಯಾ ಕಪ್ ಪಂದ್ಯದಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಗಿಲ್ ಅವರ ಸರಾಸರಿ 65ರ ಮೇಲೆ ದಾಟಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಿಲ್ ಸಿಡಿಸಿದ ಶತಕ ತುಂಬಾನೇ ಅತ್ಯುತ್ತಮ ಆಗಿತ್ತು. ಪಾಕ್ ವಿರುದ್ಧ ಕೊಹ್ಲಿ ಮತ್ತು ರಾಹುಲ್ ಹೊಡೆದ ಶತಕಗಳು ಹೆಚ್ಚು ಕಾಲ ಸ್ಮರಣೆಯಲ್ಲಿ ಉಳಿಯುವಂತದ್ದು.
ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಉತ್ತಮ ಕೊಡುಗೆ ಆಗಿ ಏಷ್ಯಾ ಕಪ್ಪಿನಲ್ಲಿ ಮಿಂಚಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಧಾಳಿ ಭಾರತೀಯ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ವಿಶ್ವದ ಎಲ್ಲ ಗ್ರೌಂಡ್ಗಳಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಶಾರ್ದೂಲ್ ಒಳ್ಳೆಯ ಆಲ್ರೌಂಡರ್ ಆಟಗಾರ. ಆತನ ಮೇಲೆ ಭರವಸೆ ಇಡಬಹುದು. ಹಾರ್ದಿಕ ಪಾಂಡ್ಯ ಬೌಲಿಂಗ್ ಕ್ಲಿಕ್ ಆದರೆ ಭಾರತಕ್ಕೆ ಗೆಲುವು ಸುಲಭ ಅನ್ನೋದು ಏಷಿಯಾ ಕಪ್ ಕೂಟದಲ್ಲಿ ಸಾಬೀತು ಆಗಿದೆ. ಭಾರತದ ಕ್ರಿಕೆಟ್ ತಂಡ ಈ ಬಾರಿ ಹಿಂದಿಗಿಂತ ಹೆಚ್ಚು ಸಮತೋಲನ ಹೊಂದಿದೆ. ವಿರಾಟ್ ಮತ್ತು ರೋಹಿತ್ ನಿಂತು ಆಡಿದರೆ ಎಷ್ಟು ದೊಡ್ಡ ಮೊತ್ತದ ಚೇಸಿಂಗ್ ಕೂಡ ಕಷ್ಟ ಅಲ್ಲ.