ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಂಡಿದ್ದು, ಭದ್ರತೆಗಾಗಿ 1,56,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. 304 ಡಿವೈಎಸ್ ಪಿ, 991 ಪಿಐ, 2610 ಪಿಎಸ್ ಐ, 5803 ಎಎಸ್ ಐ, 46,421 ಎಚ್ ಸಿ/ ಪಿಸಿ, 27,990 ಹೋಂ ಗಾರ್ಡ್ ಸೇರಿದಂತೆ 84,119 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಹೊರರಾಜ್ಯದ 8500 ಮಂದಿ ನಿಯೋಜನೆ
ಜೊತೆಗೆ 8,500 ಮಂದಿ ಹೊರ ರಾಜ್ಯದ ಪೊಲೀಸರು ಹಾಗೂ 650 ಸಿಎ ಪಿ ಎಫ್ ಒಟ್ಟು ಪೊಲೀಸರು ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಜೊತೆಗೆ 101 ಸಿಆರ್ ಪಿ ಎಫ್, 108 ಬಿಎಸ್ ಎಫ್, 75, ಸಿಐಎಸ್ ಎಫ್, 70 ಐಟಿಬಿಪಿ, 75 ಎಸ್ ಎಸ್ ಬಿ, 35 ಆರ್ ಪಿ ಎಫ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜೊತೆಗೆ 890 ಸ್ಟ್ರೆಕಿಂಗ್ ಪಾರ್ಟಿಗಳನ್ನು ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿದೆ.
ಒಟ್ಟು 58,282 ಮತಗಟ್ಟೆಗಳು ಇವೆ, 11,617 ಸೂಕ್ಷ್ಮ ಮತಗಟ್ಟೆಗಳಿವೆ. ಒಟ್ಟು 2930 ಸೆಕ್ಟರ್ಸ್ ಮೊಬೈಲ್ ಕಾರ್ಯಾಚರಣೆ ನಡೆಸಲಿವೆ. ಒದೊಂದು ಸೆಕ್ಟರ್ ಮೊಬೈಲ್ ಗಳಿಗೆ 20 ಬೂತ್ ನಿಯೋಜನೆ ಮಾಡಲಾಗಿದೆ. ಮತದಾನದ ದಿನದಂದು ನೀತಿ ಸಂಹಿತೆ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ 700 ಕ್ಕೂ ಅಧಿಕ ವಿಚಕ್ಷಣಾ ದಳಗಳನ್ನು ನೇಮಕ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡು ಅಂತಾರಾಜ್ಯ ಮತ್ತು ಅಂತರ್ ಜಿಲ್ಲಾ ಗಡಿಭಾಗದಲ್ಲಿ 700 ಕ್ಕೆ ಹೆಚ್ಚು ಚೆಕ್ ಪೋಸ್ಟ್ ತೆರೆಯಲಾಗಿದೆ
ಮೇ 9ರಂದು ಮಂಗಳವಾರ ಕೇವಲ ಮನೆ ಮನೆ ಪ್ರಚಾರಕ್ಕೆ ಅಷ್ಟೇ ಅವಕಾಶವಿರುತ್ತದೆ. ಮೇ 10ರಂದು ಬುಧವಾರ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 9ರಂದು ಮಂಗಳವಾರದಂದು ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾಲೂಕು ಕೇಂದ್ರದಿಂದ ನಿಯೋಜಿತ ಬೂತ್ ಗಳಿಗೆ ತೆರಳಿ ಚುನಾವಣಾ ಪ್ರಕ್ರಿಯೆಗಳಿಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಮೇ 13ರಂದು ಶನಿವಾರ ಮತ ಎಣಿಕೆ ನಡೆಯಲಿದೆ.