ಬಾದಾಮಿ, ಖರ್ಜೂರ ಹಾಲು ರುಚಿಕರ, ಆರೋಗ್ಯಕರ ಮಾತ್ರವಲ್ಲದೇ ಹೆಚ್ಚಿನ ಪೋಷಕಾಂಶಗಳಿಂದಲೂ ಕೂಡಿದೆ. ಖರ್ಜೂರ ಶಕ್ತಿ ಮತ್ತು ನಾರಿನಂಶದ ನೈಸರ್ಗಿಕ ಮೂಲವಾಗಿದೆ. ದೇಹದ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ನಿಯಮಿತವಾಗಿ ಈ ಹಾಲನ್ನು ಕುಡಿಯಬಹುದು. ರಕ್ತ ಹೀನತೆಗೆ ಇದು ಮದ್ದಾಗಬಲ್ಲದು ಮಾತ್ರವಲ್ಲದೇ ಹೃದಯವನ್ನು ಆರೋಗ್ಯವಾಗಿಡಲು ಇದು ಸಹಾಯ ಮಾಡುತ್ತದೆ.
ಬೇಕಾಗುವ ಪದಾರ್ಥಗಳು:
ಹಾಲು – 4.5 ಕಪ್
ಖರ್ಜೂರ – 10
ಬಾದಾಮಿ – 12
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಕೇಸರಿ ಎಳೆ – ಚಿಟಿಕೆ
ಮಾಡುವ ವಿಧಾನ:
* ಮೊದಲಿಗೆ ಬಾದಾಮಿಯನ್ನು ರಾತ್ರಿ ಅಥವಾ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಅದರ ಸಿಪ್ಪೆ ಸುಲಿದು ಪಕ್ಕಕ್ಕಿಡಿ.
* ಪಾತ್ರೆಯಲ್ಲಿ ಹಾಲನ್ನು ಸುಮಾರು 5 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಬಾದಾಮಿ ಹಾಗೂ ಖರ್ಜೂರವನ್ನು 5 ಟೀಸ್ಪೂನ್ ಹಾಲಿನೊಂದಿಗೆ ಮಿಕ್ಸರ್ ಜಾರ್ನಲ್ಲಿ ಚೆನ್ನಾಗಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.
* ಈಗ ಪೇಸ್ಟ್ ಅನ್ನು ಕುದಿಯುತ್ತಿರುವ ಹಾಲಿಗೆ ಹಾಕಿ 3-4 ನಿಮಿಷ ಕುದಿಯಲು ಬಿಡಿ.
* ಬಳಿಕ ಏಲಕ್ಕಿ ಪುಡಿ ಸೇರಿಸಿ, ಉರಿಯನ್ನು ಆಫ್ ಮಾಡಿ.
* ಕೊನೆಯಲ್ಲಿ ಕೇಸರಿ ಎಳೆಗಳು ಹಾಗೂ ಬಾದಾಮಿ ಚೂರುಗಳಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಆರೋಗ್ಯಕರ ಬಾದಾಮಿ ಖರ್ಜೂರ ಹಾಲನ್ನು ಸವಿಯಿರಿ.