ವರನಟ ಡಾ.ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಬೇರೊಂದು ಸಿನಿಮಾ ಮೂಲಕ ಲಾಂಚ್ ಆಗಬೇಕಿದ್ದ ಯುವ ರಾಜ್ಕುಮಾರ್ ಗೆ ಹೊಂಬಾಳೆ ಬ್ಯಾನರ್ ನಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಅಂದ ಹಾಗೆ ಇದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಕರೆ. ನಿನ್ನೆ (ಮಾರ್ಚ್ 23) ರಂದು ಹೊಸಪೇಟೆಯಲ್ಲಿ ಅದ್ಧೂರಿಯಾಗಿ ‘ಯುವ’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ನಡೆದಿದೆ. ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಸಂತೋಷ್ ಆನಂದ್ರಾಮ್ ‘ಯುವ’ ಸಿನಿಮಾ ಹೇಗೆ ನಿರ್ಮಾಣವಾಯಿತು ಎಂಬ ಬಗ್ಗೆ ಮಾತನಾಡಿದ್ದಾರೆ.
‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ಇಲ್ಲಿಗೆ (ಹೊಸಪೇಟೆ) ಬಂದಿದ್ದೆವು. ‘ಯುವರತ್ನ’ದಿಂದ ‘ಯುವ’ ವರೆಗೆ ನನ್ನದು ಬಹಳ ಸವಾಲಿನ ಪಯಣ. ಈ ನಡುವೆ ನಾನು ಸಾಕಷ್ಟು ಕಳೆದುಕೊಂಡಿದ್ದೇನೆ. ನನ್ನ ಅಣ್ಣ ಪುನೀತ್ ರಾಜ್ಕುಮಾರ್ ಅವರನ್ನು ನಾನು ಕಳೆದುಕೊಂಡೆ. ನನ್ನನ್ನು ಒಬ್ಬಂಟಿಯಾಗಿ ಬಿಡದೆ, ನನ್ನನ್ನು ಮತ್ತೆ ಕೆಲಸ ಮಾಡುವಂತೆ ಪ್ರೇರೇಪಿಸಿದ್ದು ಅಪ್ಪು ಅವರ ಅಭಿಮಾನಿಗಳು. ನೀವುಗಳು ಕೊಟ್ಟ ಸ್ಪೂರ್ತಿಯಿಂದಲೇ ನಾನು ಮತ್ತೆ ಕೆಲಸ ಮಾಡಲು ಸಾಧ್ಯವಾಯಿತು’ ಎಂದು ಧನ್ಯವಾದ ಹೇಳಿದರು.
‘ಈ ‘ಯುವ’ ಸಿನಿಮಾ ನಿರ್ಮಾಣವಾಗಲು ಮುಖ್ಯ ಕಾರಣ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು. ಅಶ್ವಿನಿ ಅವರು ವಿಜಯ್ ಕಿರಗಂದೂರು ಅವರಿಗೆ ಕರೆ ಮಾಡಿ, ಯುವ ರಾಜ್ಕುಮಾರ್ಗಾಗಿ ಒಂದು ಸಿನಿಮಾ ಮಾಡಬೇಕು ಎಂದು ಕೇಳಿದರು. ಆಗ ವಿಜಯ್ ಅವರು ನನ್ನನ್ನು ಕರೆದು ಯುವ ಲಾಂಚ್ ಮಾಡಲು ಒಂದು ಸಿನಿಮಾ ಮಾಡಬೇಕು ಅದನ್ನು ನೀನೇ ಮಾಡಬೇಕು ಎಂದರು. ಯುವ ನಮ್ಮ ಜವಾಬ್ದಾರಿ ಎಂದುಕೊಂಡು ನಾವು ಕೆಲಸ ಮಾಡಬೇಕು ಎಂದರು. ಅದನ್ನೇ ನಾನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇನೆ’ ಎಂದರು.
‘ನಮ್ಮ ತಂಡ ನಮಗೆ ಅದ್ಭುತವಾದ ಬೆಂಬಲ ನೀಡಿತು. ಅವರು ಕೊಟ್ಟ ಬೆಂಬಲದಿಂದ ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಯುವ ಹೊಸ ನಟ ಅನಿಸಲಿಲ್ಲ. ಅವರೊಟ್ಟಿಗೆ ಕೆಲಸ ಮಾಡುವಾಗ ಪ್ರತಿದಿನವೂ ಹೊಸತು ಎನಿಸುತ್ತಿತ್ತು. ಯುವನಿಗೆ ಮೊದಲ ಶಾಟ್ ಓಡುವ ದೃಶ್ಯ ಚಿತ್ರೀಕರಣ ಮಾಡಿದೆವು. ಯುವ ಬಹಳ ವರ್ಷಗಳ ಕಾಲ ಇಲ್ಲಿ ನೆಲೆ ನಿಲ್ಲುವ ನಟ’ ಎಂದಿದ್ದಾರೆ ಸಂತೋಷ್ ಆನಂದ್ರಾಮ್.